ಮಂಗಳೂರು: ಅಪ್ರಾಪ್ತೆ ಅತ್ಯಾಚಾರಗೈದು, ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಬೆದರಿಕೆಯೊಡ್ಡಿದ್ದ, ಆರೋಪಿಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ಹಾಗೂ ಎಫ್ಟಿಎಸ್ಸಿ - 2 ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ತೋಡಾರು ಗ್ರಾಮ ನಿವಾಸಿ ಸೀತಾರಾಮ ಶಿಕ್ಷೆಗೊಳಗಾದ ಆರೋಪಿ. ಈತನ ಮೇಲಿರುವ ಆರೋಪ ಸಾಬೀತಾಗಿರುವ ಹಿನ್ನೆಲೆ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ಸೀತಾರಾಮ ತನ್ನ ಸಂಬಂಧಿಯಾಗಿರುವ ಬಾಲಕಿಯನ್ನು 2019ರ ಜನವರಿ 8ರಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ಕೃತ್ಯದ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡುವುದಾಗಿ ಬೆದರಿಕೆಯನ್ನೊಡ್ಡಿದ್ದಾನೆ. ಈ ವಿಚಾರವನ್ನು ಸಂತ್ರಸ್ತ ಬಾಲಕಿ ಮನೆಯಲ್ಲಿ ಹೇಳಿದ್ದಾಳೆ. ಆ ಬಳಿಕ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.