ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸೊ ಕಾಯ್ದೆ ಅಡಿ ಪುತ್ತೂರು ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
ಬಾಲಕಿ ಅಪಹರಣ ಸಂಬಂಧ ಮೂವರು ಯುವಕರ ಬಂಧನ ಇಲ್ಲಿನ ಪುತ್ತೂರಿನ ಬಿರುಮಲೆ ಗುಡ್ಡೆದಲ್ಲಿ ಮಂಗಳೂರಿನ ಕೊಡಿಯಾಲ್ ಬೈಲಿನ 17 ವರ್ಷದ ಬಾಲಕಿಯನ್ನು ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಅಪಹರಿಸಲಾಗಿದೆ ಎಂದು ಬಾಲಕಿ ತಂದೆ ಆರೋಪಿಸಿದ್ದಾರೆ. ಈ ಸಂಬಂಧ ಮಹಮ್ಮದ್ ನಯೀಮ್, ಮಹಮ್ಮದ್ ತಾಸೀರ್, ಇಮ್ರಾನ್ ಎಂಬುವವರನ್ನು ಬಂಧಿಸಲಾಗಿದೆ. ಫೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಆ.7ರಂದು ಸಂಜೆ ಕೋಡಿಯಾಲ್ ಬೈಲಿನ ಮನೆಯಿಂದ ಎಂಪಾಯರ್ ಮಹಲ್ ಬಳಿ ಹೋಗಿ ಬರುವುದಾಗಿ, ಮನೆಯಿಂದ ಹೊರಟ ಬಾಲಕಿ ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಎಲ್ಲೆಡೆ ವಿಚಾರಿಸಿ ಹುಡುಕಿದರೂ ಮಗಳು ಪತ್ತೆಯಾಗುವುದಿಲ್ಲ. ಈ ಸಂದರ್ಭದಲ್ಲಿ ಪುತ್ತೂರಿನ ಬೀರಮಲೆ ಗುಡ್ಡೆಯಲ್ಲಿ ಇರುವುದಾಗಿ ಆ. 8ರ ಬೆಳಗ್ಗೆ ಮಾಹಿತಿ ಸಿಕ್ಕಿದೆ. ಅದರಂತೆ ಮಧ್ಯಾಹ್ನ ಪುತ್ತೂರಿನ ಬೀರಮಲೆಗುಡ್ಡೆಗೆ ಬಂದು ಪರಿಶೀಲಿಸಿದಾಗ ಆರೋಪಿಗಳ ಜೊತೆ ಬಾಲಕಿ ಕಾರಿನಲ್ಲಿ ಇರುವುದು ಕಂಡುಬಂದಿದೆ ಎಂದು ಅಪ್ರಾಪ್ತ ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ ಬಿಜೈ ಬಳಿ ಬಂದು ಕರೆದ್ಯೊಯ್ದು, ನಂತರ ಪಾರ್ಟಿ ಮಾಡಿ, ರಾತ್ರಿಯಿಡೀ ಅಲ್ಲೇ ಉಳಿಸಿಕೊಂಡಿದ್ದಾರೆ. ಅಪ್ರಾಪ್ತೆ ಎಂದು ತಿಳಿದಿದ್ದರೂ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದಲೇ ಕಾರಿನಲ್ಲಿ ಅಪಹರಿಸಿಕೊಂಡು ಪುತ್ತೂರಿನ ಬೀರಮಲೆಗುಡ್ಡೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಅಪ್ರಾಪ್ತ ಬಾಲಕಿಯ ತಂದೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.