ಮಂಗಳೂರು: ಗರೋಡಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಘಟನಾ ಸ್ಥಳಕ್ಕೆ 6 ದಿನಗಳ ಬಳಿಕ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ ಕೊಟ್ಟರು.
ನವೆಂಬರ್ 19 ರಂದು ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಶಂಕಿತ ಉಗ್ರ ಶಾರೀಕ್ ಕೈಯಲ್ಲಿದ್ದ ಕುಕ್ಕರ್ನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯ ಮರುದಿನವೇ ಎಡಿಜಿಪಿ ಅಲೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಡಿಜಿಪಿ ಪ್ರವೀಣ್ ಸೂದ್, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ದ.ಕ ಜಿಲ್ಲೆಯ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಆರು ದಿನಗಳ ಬಳಿಕ ಶುಕ್ರವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಘಟನೆಯ ತನಿಖೆಯನ್ನು ಎನ್ಐಎಗೆ ಹಸ್ತಾಂತರ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ಪಿಎಫ್ಐ ನಿಷೇಧದ ಬಳಿಕ ಇಂಥ ಘಟನೆಗೆ ಸರ್ಕಾರ ಕಡಿವಾಣ ಹಾಕಿದ್ದು, ಸಂಚುಗಳನ್ನು ವಿಫಲಗೊಳಿಸುವ ಕೆಲಸ ಮಾಡಲಾಗುತ್ತಿದೆ. ಪಿಎಫ್ಐ ನಿಷೇಧ ಇದರ ಒಂದು ಭಾಗ ಎಂದರು.