ಮಂಗಳೂರು:ಯಾವ ಖಾತೆ ನೀಡಿದರೂ ನಿಭಾಯಿಸಬಲ್ಲೆ ಎಂದು ನೂತನವಾಗಿ ಸಚಿವರಾಗಿ ಆಯ್ಕೆಯಾದ ಸುನೀಲ್ ಕುಮಾರ್ ಹೇಳಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು, ಉಡುಪಿಗೆ ಹೋಗುವ ಮಾರ್ಗಮಧ್ಯೆ ಕಾವೂರು ಜಂಕ್ಷನ್ನಲ್ಲಿ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಸಂಜೆ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಲಿದ್ದೇನೆ. ನಾಳೆ ಮಧ್ಯಾಹ್ನ 12 ಗಂಟೆಗೆ ಎಲ್ಲಾ ಅಧಿಕಾರಿಗಳ ಸಭೆ ಕರೆಯಲಿದ್ದೇನೆ. ಜೊತೆಗೆ ಜಿಲ್ಲಾ ಆಸ್ಪತ್ರೆಗೂ ಭೇಟಿ ನೀಡಲಿದ್ದೇನೆ ಎಂದರು.
ಆಕ್ಸಿಜನ್ ಜನರೇಟ್ ಯುನಿಟ್ ಈಗಾಗಲೇ ಉಡುಪಿ ಜಿಲ್ಲೆಗೆ ಬಂದಿದೆ. ಅದನ್ನು ಯಾವ ರೀತಿ ಕಾರ್ಯಾಚರಿಸುವುದು, ಅದರ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಜೊತೆಗೆ ಜಿಲ್ಲಾಧಿಕಾರಿಗಳೊಂದಿಗೆ ನಡೆಯುವ ಸಭೆಯಲ್ಲಿ ಮೂರನೇ ಅಲೆಯ ಸೋಂಕಿನ ಮುಂಜಾಗ್ರತೆಯ ಬಗ್ಗೆ ಕ್ರಮಗಳ ಹಾಗೂ ಜಿಲ್ಲೆಯ ಮಟ್ಟಿಗೆ ಸರ್ಕಾರದ ಮಟ್ಟಿಗೆ ಯಾವ ನೆರವನ್ನು ನೀಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಬಳಿಕ ಸಿಎಂ ಜೊತೆ ಚರ್ಚಿಸಿ ಉಡುಪಿ ಜಿಲ್ಲೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
ನೆರೆ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಹಾಗೂ ಭಾಗಶಃ ಮನೆ ಹಾನಿಯಾದವರಿಗೆ ಬೇರೆ ಬೇರೆ ಹಂತಗಳಲ್ಲಿ ಅನುದಾನ ಕೊಡಲಾಗುತ್ತದೆ. ಕೆಲವೊಂದು ತಾಂತ್ರಿಕ ದೋಷಗಳಿಂದ ಪರಿಹಾರ ದೊರೆಯುವುದು ಸ್ವಲ್ಪ ತಡ ಆಗಬಹುದು. ಆ ರೀತಿಯ ಯಾವುದಾದರೂ ನಿರ್ದಿಷ್ಟ ಪ್ರಕರಣಗಳಿದ್ದಲ್ಲಿ ನನ್ನ ಗಮನಕ್ಕೆ ತಂದಲ್ಲಿ ತಕ್ಷಣ ನಾನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.