ಕಡಬ (ದಕ್ಷಿಣ ಕನ್ನಡ):ಇಲ್ಲಿಯವರೆಗೂನಾನು ಪಕ್ಷದಲ್ಲಿ ಎನನ್ನು ಕೇಳಿಲ್ಲ. ಪಕ್ಷವು ನನಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದು, ಆ ಎಲ್ಲಾ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿದ್ದೇನೆ. ಆದ್ದರಿಂದ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದನ್ನು ಪಾಲಿಸುತ್ತೇನೆ ಎಂದು ಬಂದರು ಮತ್ತು ಒಳನಾಡು ಮತ್ತು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ನೂತನ ಕಡಬ ತಾಲೂಕು ಪಂಚಾಯತ್ ಕಟ್ಟಡ, ಮಿನಿ ವಿಧಾನ ಸೌಧ ಕಟ್ಟಡ, ಕೊಯಿಲ ಪಶು ವೈದ್ಯಕೀಯ ಕಾಲೇಜಿನ ಉದ್ಘಾಟನೆ ಮತ್ತು ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮಗಳು ಮಾರ್ಚ್ 24ರಂದು ನಡೆಯಲಿದ್ದು, ಈ ಬಗ್ಗೆ ಕಡಬ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿಯಾಗಿ ಸಚಿವ ಎಸ್.ಅಂಗಾರ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಎಸ್.ಅಂಗಾರ ಅವರು, ಕಡಬ ತಾಲೂಕಿಗೆ ಸಂಬಂಧಪಟ್ಟು ಅತಿ ಅಗತ್ಯವಾಗಿದ್ದ ತಾಲೂಕು ಪಂಚಾಯತ್ ಕಟ್ಟಡ, ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಮಿನಿ ವಿಧಾನಸೌಧ ಕಟ್ಟಡ, ಕೊಯಿಲ ಪಶು ವೈದ್ಯಕೀಯ ಕಾಲೇಜು ಇವುಗಳ ಉದ್ಘಾಟನೆ ನಡೆಸಲಾಗುವುದು. ಅಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಯೂ ನಡೆಸಲಾಗುವುದು ಎಂದು ಹೇಳಿದರು.
ಸುಳ್ಯದಲ್ಲಿ ಈ ಬಾರಿಯ ವಿಧಾನ ಸಭೆ ಚುನಾವಣೆಗೆ ಅಭ್ಯರ್ಥಿ ಬದಲಾವಣೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಅಂಗಾರ ಅವರು, ‘‘ನಾನು ಈ ತನಕ ಪಕ್ಷದಲ್ಲಿ ಯಾವುದನ್ನೂ ಕೇಳಿಲ್ಲ. ಆದರೂ ಪಕ್ಷ ನನಗೆ ಹಲವು ಜವಾಬ್ದಾರಿಗಳನ್ನು ನೀಡಿದೆ. ನನಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿದ್ದೇನೆ. ಆದ್ದರಿಂದ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದನ್ನು ಪಾಲಿಸುತ್ತೇನೆ’’ ಎಂದು ಹೇಳಿದರು.