ಕರ್ನಾಟಕ

karnataka

ETV Bharat / state

Chakravarti Sulibele: ಪಿಯುಸಿ ಫೇಲ್ ಆದ ಪ್ರಿಯಾಂಕ್​ ಖರ್ಗೆ, ಸೂಲಿಬೆಲೆಯ ಎಂಜಿನಿಯರ್ ಪದವಿ ಬಗ್ಗೆ ಕೇಳುತ್ತಿದ್ದಾರೆ: ಡಾ.ಭರತ್ ಶೆಟ್ಟಿ ವ್ಯಂಗ್ಯ - Minister Priyanka Kharge

ಚಕ್ರವರ್ತಿ ಸೂಲಿಬೆಲೆ ಕುರಿತು ಸಚಿವ ಪ್ರಿಯಾಂಕ್​ ಖರ್ಗೆ ಅವರು ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಡಾ. ಭರತ್ ಶೆಟ್ಟಿ ವೈ. ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

MLA Dr Bharat Shetty Y
ಶಾಸಕ ಡಾ ಭರತ್ ಶೆಟ್ಟಿ ವೈ

By

Published : Jun 10, 2023, 7:31 PM IST

ಮಂಗಳೂರು:''ಎಂಜಿನಿಯರಿಂಗ್ ಮುಗಿಸಿ ಕೈ ತುಂಬಾ ವೇತನವಿದ್ದ ಕಲಸ ತ್ಯಜಿಸಿ, ದೇಶದ ಭವಿಷ್ಯಕ್ಕಾಗಿ ಯುವ ಸಮೂಹದಲ್ಲಿ ರಾಷ್ಟ್ರೀಯತೆ, ದೇಶ ಭಕ್ತಿ ಉದ್ದೀಪನಗೊಳಿಸುತ್ತಿರುವ ಚಕ್ರವರ್ತಿ ಸೂಲಿಬೆಲೆಯ ವಿದ್ಯಾರ್ಹತೆಯನ್ನು ಪ್ರಥಮ ಪಿಯುಸಿ ಫೇಲ್ ಆದ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ'' ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ವ್ಯಂಗ್ಯವಾಡಿದ್ದಾರೆ.

ಸೂಲಿಬೆಲೆ ಯಾವ ಪಿಎಚ್‌ಡಿ ಪದವಿ ಗಳಿಸಿದ್ದಾನೆ. ಬಾಡಿಗೆ ಭಾಷಣಗಾರರನ್ನು ಲೇಖಕರನ್ನಾಗಿ ಮಾಡಿ, ಅವನ ಪಾಠ ಮಕ್ಕಳು ಯಾಕೆ ಓದಬೇಕು ಎಂದು ಸಚಿವ ಪ್ರಿಯಾಂಕ್​ ಖರ್ಗೆ ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಡಾ. ಭರತ್ ಶೆಟ್ಟಿ ವೈ. ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ಮೊದಲು ನಿಮ್ಮ ವಿದ್ಯಾರ್ಹತೆ ನೋಡಿಕೊಂಡು ಸೂಲಿಬೆಲೆ ಬಗ್ಗೆ ಮಾತನಾಡಿ, ನಿಮಗೆ ಪ್ರಶ್ನಿಸುವ ನೈತಿಕ ಹಕ್ಕು ಇಲ್ಲ ಎಂದು ಖರ್ಗೆಗೆ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ರಾಷ್ಟ್ರೀಯತೆಯನ್ನು, ದೇಶ ಪ್ರೇಮವನ್ನು ಜಾಗೃತಿ ಮಾಡುವುದೇ ಅಪರಾಧವೆಂದು ಪ್ರಿಯಾಂಕ ಖರ್ಗೆ ತಿಳಿದಂತಿದೆ. ದೇಶ ಭಕ್ತಿ, ನಮ್ಮ ರಾಷ್ಟ್ರ ಎಂಬ ಭಾವನೆಯನ್ನು ನಮ್ಮ ಭವಿಷ್ಯದ ಮಕ್ಕಳಿಗೆ ಯಾವತ್ತೂ ತಿಳಿಸುವ ಗೋಜಿಗೆ ಹೋಗದ ಕಾಂಗ್ರೆಸ್ ಪಕ್ಷವು, ದೇಶದೊಳಗೆ ಭಯೋತ್ಪಾದಕನಿಗೆ ಏನಾದಾರೂ ಆದರೆ ಕಣ್ಣೀರಿಡುವ ಪಕ್ಷವಾಗಿದೆ'' ಎಂದು ಆರೋಪಿಸಿದ್ದಾರೆ.

''ರಾಷ್ಟ್ರೀಯತೆಯ ಭಾವನೆಯಿಲ್ಲದೆ ಸೊರಗಿರುವ ಮಕ್ಕಳು ಇಂದು ರೈಲು ಓಡಾಡುವ ಹಳಿಗಳ ಮೇಲೆ ಕಲ್ಲಿಟ್ಟು, ಕಲ್ಲು ತೂರಾಟ ನಡೆಸಿ ಹಿಂಸಾ ಪ್ರವೃತ್ತಿ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಪಟ ಜಾತ್ಯತೀತ ಮನೋಭಾವದ ಕಾರಣದಿಂದಾಗಿ ದೇಶ ಸೊರಗುತ್ತಿದೆಯೇ ಹೊರತು, ಸೂಲಿಬೆಲೆಯಂತಹ ದೇಶ ಭಕ್ತರಿಂದಲ್ಲ'' ಎಂದು ಅವರು ಕಿಡಿಕಾರಿದ್ದಾರೆ.

ಸೂಲಿಬೆಲೆಯ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ- ಸಿ.ಟಿ. ರವಿ:''ಚಕ್ರವರ್ತಿ ಸೂಲಿಬೆಲೆಯ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ. ಬಿನ್ ಲಾಡೆನ್ ಬಂದರೆ ಕಾಂಗ್ರೆಸ್​ನವರು ಒಳಗಡೆ ಬಿಟ್ಟುಕೊಳ್ಳುತ್ತಾರೆ. ಆದರೆ, ಚಕ್ರವರ್ತಿ ಸೂಲಿಬೆಲೆ ಅವರ ವಿಚಾರಗೋಷ್ಠಿ ರದ್ದು ಮಾಡುತ್ತಾರೆ. ಇವರು ಪ್ರಜಾ ಪ್ರಭುತ್ವದ ಕುರಿತು ಮಾತನಾಡುತ್ತಾರೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದರು.

ಸೂಲಿಬೆಲೆ ಅವರನ್ನು ಸಚಿವ ಎಂ.ಬಿ. ಪಾಟೀಲ್​ ಜೈಲಿಗೆ ಕಳಿಸುವ ಬೆದರಿಕೆ ಹಾಕಿರುವ ಕುರಿತು ಚಿಕ್ಕಮಗಳೂರು ನಗರದಲ್ಲಿ ಜೂನ್​ 7ಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಸಿ.ಟಿ. ರವಿ ಅವರು, "ಈ ರೀತಿ ಮಾಡಿರುವುದನ್ನು ಅಘೋಷಿತ ತುರ್ತು ಪರಿಸ್ಥಿತಿ ಎಂದು ನಾನು ಕರೆಯಲು ಬಯಸುವುದಿಲ್ಲ. ಅತಿಯಾದ ಅಧಿಕಾರದ ಮದ ಎಂದು ಕರೆಯಲಾಗುತ್ತದೆ. ಅದು ಕೂಡ ಬಹಳ ದಿನ ಇರಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನವನ್ನೇ ಬುಡ ಮೇಲು ಮಾಡಿ ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿದ ಕಾಂಗ್ರೆಸ್​ ಪಕ್ಷಕ್ಕೆ ಜನರು ಹಿಂದೆ ಬುದ್ಧಿ ಕಲಿಸಿದ್ದನ್ನು ಅವರು ನೆನಪಿಟ್ಟು ಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಮದ ಇಳಿಯಲು ಹಾಗೂ ಇಳಿಸಲು ಬಹಳ ಕಾಲ ಬೇಕಾಗುವುದಿಲ್ಲ" ಎಂದು ಗರಂ ಆಗಿದ್ದರು.

''ಗೋಹತ್ಯೆ ನಿಷೇಧ ಕಾನೂನು ರದ್ದು ಮಾಡುವ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಓಲೈಕೆ ಹಾಗೂ ತುಷ್ಟೀಕರಣದ ರಾಜನೀತಿಯನ್ನೇ ಮಾಡಿಕೊಂಡು ಬಂದ ಕಾಂಗ್ರೆಸ್​ ಪಕ್ಷದಿಂದ ಹೊಸದೇನನ್ನೂ ನಿರೀಕ್ಷೆ ಮಾಡಲು ಆಗುವುದಿಲ್ಲ. ಭಾರತ ದೇಶಕ್ಕೆ ಸಂವಿಧಾನ, ಕಾನೂನು ಇದೆ. ಅದನ್ನ ಮೀರಿ ಏನಾದ್ರೂ ಮಾಡಲು ಹೋದರೆ ಬುದ್ಧಿ ಕಲಿಸಲು ಜನರಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗುವುದು : ಎಚ್. ಕೆ‌‌ ಪಾಟೀಲ್

ABOUT THE AUTHOR

...view details