ಮಂಗಳೂರು: ಹಾನಿಗೊಳಗಾದ ಬೋಟ್ಗಳು, ಸಾವಿಗೀಡಾದ ಮೀನುಗಾರರು ಹಾಗೂ ಗಾಯಾಳುಗಳಿಗೆ ಶಸ್ತ್ರಚಿಕಿತ್ಸಾ ಪರಿಹಾರ ವಿತರಣೆ ಸೇರಿದಂತೆ ಸುಮಾರು 20 ಪ್ರಕರಣಗಳಿಗೆ ಪರಿಹಾರ ಮೊತ್ತ ನೀಡದೆ ಒಂದು ವರ್ಷದಿಂದ ಬಾಕಿಯಿರಿಸಿರುವ ಬಗ್ಗೆ ಗರಂ ಆದ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ, ಮೀನುಗಾರಿಕಾ ಇಲಾಖೆಯ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಮೀನುಗಾರರು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡರು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಗುಂಪು ವಿಮೆ ಯೋಜನೆಯಡಿ ಫಲಾನುಭವಿಗಳಿಗೆ ಯಾವ ಪರಿಹಾರವೂ ಒಂದು ವರ್ಷದಿಂದ ದೊರೆತಿಲ್ಲವೆಂದರೆ ಮೀನುಗಾರಿಕೆ ಇಲಾಖೆ ಇರುವುದೇಕೆ?. ಕೇಂದ್ರ ಸರಕಾರದಿಂದ ಪರಿಹಾರ ಹಣ ದೊರೆಯದಿದ್ದಲ್ಲಿ ಇಂತಹ ಯೋಜನೆ ಅನುಷ್ಠಾನ ಮಾಡುವುದೇಕೆ?. 20 ಮಂದಿಯಲ್ಲಿ ಓರ್ವ ಫಲಾನುಭವಿಗೂ ಪರಿಹಾರ ದೊರಕದಿದ್ದಲ್ಲಿ ಈ ಯೋಜನೆಯ ಸಂಪೂರ್ಣ ನಿಷ್ಫಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವ್ಯಕ್ತಿಯೋರ್ವ ಸತ್ತ ಮೂರು ತಿಂಗಳೊಳಗೆ ಅಗತ್ಯ ದಾಖಲೆ ಸಲ್ಲಿಸಿ ಕುಟುಂಬಸ್ಥರು ಪರಿಹಾರ ಪಡೆಯಬೇಕೆಂದು ಇಲಾಖೆ ಬಡ ಮೀನುಗಾರ ಕುಟುಂಬಕ್ಕೆ ಮಾಹಿತಿ ನೀಡಬೇಕು. ಆದರೆ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಹೇಗೆ?. 3 ತಿಂಗಳೊಳಗೆ ಪ್ರಕ್ರಿಯೆ ನಡೆಯಬೇಕು. ಇಲ್ಲದಿದ್ದಲ್ಲಿ ಪರಿಹಾರದ ಹಣ ದೊರಕುವುದಿಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಅದನ್ನು ಜನರಿಗೆ ಪ್ರಚಾರ ಮಾಡಬೇಕು ಇಲಾಖೆಯವರು. ಕೆಲಸ ಮಾಡುವ ಅಧಿಕಾರಿಗಳು ಮಾತ್ರ ನನ್ನ ಇಲಾಖೆಯಲ್ಲಿ ಇರಬೇಕು ಎಂದು ಹೇಳಿದರು.
ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳಿಗೆ ಒಟ್ಟು 3.60 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಹಿಂದಿನ ಬಿಜೆಪಿ ಸರ್ಕಾರ ಮೀನುಗಾರರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಹಿಂದಿನ ಬಾಕಿಯಲ್ಲಿ ಮೊದಲ ಹಂತದಲ್ಲಿ ₹1.60 ಕೋಟಿ ಬಿಡುಗಡೆಗೊಳಿಸಿ, ಆದ್ಯತೆ ಮೇರೆಗೆ ಪರಿಹಾರ ಹಣ ವಿತರಿಸಲಾಗುವುದು ಎಂದು ಸಚಿವರು ಹೇಳಿದರು.