ನಳಿನ್ ಕುಮಾರ್ ಕಟೀಲ್ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ ಮಂಗಳೂರು:''ದಕ್ಷಿಣ ಕನ್ನಡ ಜಿಲ್ಲೆಯ ಸಂಸತ್ ಸ್ಥಾನಕ್ಕೆ ಬಿಜೆಪಿಯಿಂದ ಈ ಬಾರಿಯೂ ನಳಿನ್ ಕುಮಾರ್ ಕಟೀಲು ಅವರಿಗೆ ಟಿಕೆಟ್ ಕೊಡಬೇಕು. ನಾನು ಚುನಾವಣೆಗೆ ನಿಲ್ಲುವುದಕ್ಕೆ ಹೋಗೋಲ್ಲ. ನಾನೇ ಇಲ್ಲಿಗೆ ಬರುತ್ತೇನೆ, ಅವರಿಗೆ ಚುನಾವಣೆಯಲ್ಲಿ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ'' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ''ನಳಿನ್ ಕುಮಾರ್ ಕಟೀಲು ಚರಂಡಿ - ಕಾಲುವೆ ನೋಡಬೇಡಿ, ಹೊಡಿಬಡಿ ಅಂದಿದ್ದರು. ಕಳೆದ ಬಾರಿ ಚುನಾವಣೆಯಲ್ಲಿ ಸೋಲಲು ಅವರೇ ಕಾರಣ. ನನ್ನ ವೈಯಕ್ತಿಕ ವಿಷಯದಲ್ಲಿ ತಪ್ಪುಮಾಹಿತಿ ಪಡೆದು ನನ್ನ ರಾಜೀನಾಮೆಗೆ ಆಗ್ರಹಿಸಿದ್ದರು. ಬಿಜೆಪಿ ಅಧಿಕಾರ ಕಳೆದುಕೊಳ್ಳಲು ಅವರು ಕಾರಣ. ಅವರು ರಾಜೀನಾಮೆ ನೀಡಬೇಕಿತ್ತು'' ಎಂದು ಕಿಡಿಕಾರಿದರು.
''ಯತ್ನಾಳ್ ಹೇಳಿದ್ರಲ್ಲ ಸಾವಲ್ಲಿ ರಾಜಕೀಯ ಅಂತ, ಬಂಗಾರಪ್ಪ ಹೆಸರಿನಲ್ಲಿ ನಳಿನ್ ಇಲ್ಲಿ ಸಂಸದರಾಗಿದ್ದು. 2004ರಲ್ಲಿ ಬಂಗಾರಪ್ಪ ನೀಡಿರುವ ಭಿಕ್ಷೆಯಲ್ಲಿ ಬಿಜೆಪಿ ಅಧಿಕಾರ ನೋಡಿದವರು ಇವರು. ಪ್ರವೀಣ್ ನೆಟ್ಟಾರು ಸಾವಿನ ಸಂದರ್ಭ ನಳಿನ್ ವಿರುದ್ಧ ಘೋಷಣೆ ಕೂಗಿದವರು, ಅವರ ಕಾರು ಪಂಕ್ಚರ್ ಮಾಡಿದವರು, ಕಾಂಗ್ರೆಸ್ ಕಾರ್ಯಕರ್ತರಲ್ಲ ಬಿಜೆಪಿ, ಹಿಂದೂ ಸಂಘಟನೆಗಳು ಕಾರ್ಯಕರ್ತರು. ಅವರಿಗೆ ನಾಚಿಕೆ ಆಗಬೇಕು'' ಎಂದು ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
''ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಕೊಡುವುದಿಲ್ಲ ಅಂದಿದ್ದರು. ಆದರೆ, ನಾವು ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಟೀಕೆ ಮಾಡಿದವರ ಹಣೆಬರಹಕ್ಕೆ ಒಂದು ಇಂತಹ ಒಂದು ಕಾರ್ಯಕ್ರಮ ಕೊಟ್ಟಿಲ್ಲ. ಬಿಜೆಪಿಯವರು ಸ್ವಾಮಿ ವಿವೇಕಾನಂದರನ್ನ ಅಡಮಾನ ತೆಗೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಅವರು ಯುವಕರ ಆಶಾಕಿರಣ. ಬಿಜೆಪಿಯವರು ಸ್ವಾಮಿ ವಿವೇಕಾನಂದರು ದುರ್ಬಳಕೆ ಮಾಡಿದ್ದಕ್ಕೆ ಅವರಿಗೆ ಈಗ ಶಿಕ್ಷೆಯಾಗಿದೆ'' ಎಂದರು.
''ಕಾಂಗ್ರೆಸ್ಗೆ ಇಲ್ಲಿ ಬಲ ಇಲ್ಲದಿದ್ರೂ ನಾವು ಮತ್ತೆ ವಿಶ್ವಾಸ ಗಳಿಸಲು ಕರಾವಳಿಗೆ ಬರುತ್ತಿದ್ದೇವೆ. ಈ ಭಾಗದಲ್ಲಿ ಪಕ್ಷದ ಸಂಘಟನೆ ಮಾಡೋದು ನಮ್ಮ ಹಕ್ಕು ಆಗಿದೆ. ಈ ಭಾಗದಲ್ಲಿ ಹಿಂದುಳಿದ ವರ್ಗದವರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯೂ ಬಂಡವಾಳ ಹೂಡಿಕೆ ಮಾಡಿ, ಅಭಿವೃದ್ಧಿ ಮೂಲಕ ಜನತೆ ಸಂತೋಷವಾಗಿ ಇರಬೇಕು ಎನ್ನುವುದೇ ನಮ್ಮ ಆಶಯ. ಇದನ್ನು ಮರುಕಳಿಸಲು ನಾನು ಇಲ್ಲಿ ಬಂದು ಕೈ ಜೋಡಿಸ್ತೇನೆ. ನಳಿನ್ ಕುಮಾರ್ ಕಟೀಲ್ ಇಲ್ಲಿ ಸೋಲು ಅನುಭವಿಸಬೇಕು, ನಾನು ಅದರ ಪಾತ್ರಧಾರ ಆಗುತ್ತೇನೆ'' ಎಂದು ಮಧು ಬಂಗಾರಪ್ಪ ಗರಂ ಆದರು.
ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ಜ.21ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ ಏರ್ಪಡಿಸಲಾಗಿದೆ. ಸಮಾವೇಶದ ಬಗ್ಗೆ ನಾಯಕರ ಜೊತೆಗೆ ಚರ್ಚಿಸಿ ಮಾಹಿತಿ ಸಂಗ್ರಹ ಮಾಡಲಾಗಿದೆ. ಶಿವಮೊಗ್ಗದಲ್ಲಿ ನಿನ್ನೆ (ಶುಕ್ರವಾರ) ಯುವನಿಧಿ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ನಾವು ಯುವಕರಿಗಾಗಿ ಯುವನಿಧಿ ಯೋಜನೆ ನೀಡಿದ್ದೇವೆ. ಯುವಕರಿಗೆ ಸಿದ್ದರಾಮಯ್ಯ ಅವರು ಉತ್ತಮ ಕಾರ್ಯಕ್ರಮ ಕೊಟ್ಟಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರಸರಕಾರ ಹಿಂದೆ ಬಿದ್ದಿದೆ. ದೇಶದಲ್ಲಿ ನಿರುದ್ಯೋಗ ಹತ್ತು ಪರ್ಸೆಂಟ್ ಆಗಿದೆ, ಇದು ಬಿಜೆಪಿ ಸಾಧನೆ. ಜನ ಬಡತನದಲ್ಲಿ ಓದಿರುತ್ತಾರೆ. ಎಷ್ಟೋ ಮಂದಿ ಡಿಗ್ರಿ ಮಾಡಿದವರು ಕೂಲಿ ಮಾಡುತ್ತಿದ್ದಾರೆ. ಇಂಥವರಿಗೆ ಕೈಹಿಡಿಯಬೇಕೆಂದು ಮೂರು ವರ್ಷ ಭತ್ಯೆ ಕೊಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ರಾಮಮಂದಿರ ವಿಚಾರದಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಭಯ ಕಾಂಗ್ರೆಸ್ಗೆ ಕಾಡುತ್ತಿದೆ: ಬಿಎಸ್ವೈ