ಪುತ್ತೂರು :ರಾಜ್ಯದಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರ ಬದುಕು ಕಷ್ಟದಲ್ಲಿರುವುದು ಗೊತ್ತಾಗಿದೆ. ಸರ್ಕಾರ ಪ್ರಕಟಿಸುತ್ತಿರುವ ಪ್ಯಾಕೇಜ್‌ನಲ್ಲಿ ಅತಿಥಿ ಶಿಕ್ಷಕರನ್ನು ಕೂಡ ಸೇರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸರ್ಕಾರದ ವಿಶೇಷ ಪ್ಯಾಕೇಜ್‌ನಲ್ಲಿ ಅತಿಥಿ ಶಿಕ್ಷಕರನ್ನೂ ಸೇರ್ಪಡಿಸುವ ಬಗ್ಗೆ ನಿರ್ಧಾರ- ಕೋಟ ಶ್ರೀನಿವಾಸ ಪೂಜಾರಿ ಓದಿ: ತುತ್ತಿಗಾಗಿ ಪರದಾಟ: ಬೀಡಿ ಕಟ್ಟುವ ಕಾಯಕಕ್ಕಿಳಿದ ಅತಿಥಿ ಶಿಕ್ಷಕಿ
ಈ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದನ್ನ ನೋಡಿ ಸಚಿವರು ಸ್ಪಂದಿಸಿದ್ದಾರೆ. ಇಂದು ಪುತ್ತೂರಿನಲ್ಲಿ (ಶುಕ್ರವಾರ) ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಸ್ ಕಂಡಕ್ಟರ್‌ಗಳು, ಡ್ರೈವರ್‌ಗಳು, ಫೊಟೋಗ್ರಾಫರ್‌ಗಳು ಸೇರಿದಂತೆ ಹಲವು ವರ್ಗದ ಜನರು ಸಲ್ಲಿರುವವರಂತೆ ಅತಿಥಿ ಶಿಕ್ಷಕರೂ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳು ಅನೇಕ ವರ್ಗಕ್ಕೆ ತಮ್ಮ ಪ್ಯಾಕೇಜ್‌ನಲ್ಲಿ ನೆರವು ಪ್ರಕಟಿಸಿದ್ದಾರೆ. ಇನ್ನುಳಿದವರನ್ನು ಪಟ್ಟಿ ಮಾಡಿ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇನೆ. ಇದಲ್ಲದೆ ಗರಡಿ ಅರ್ಚಕರು ಕೂಡ ಸಮಸ್ಯೆಯಲ್ಲಿದ್ದಾರೆ. ಅವರು ಸೇರಿದಂತೆ ಸಂಕಷ್ಟದಲ್ಲಿರುವ ಇನ್ನೂ ಹಲವು ವರ್ಗದ ಜನರನ್ನು ಗಮನಿಸಲಾಗುವುದು.
ಎಲ್ಲರನ್ನೂ ಗಮನಿಸಿಕೊಂಡು ಎಲ್ಲರೂ ಒಟ್ಟಾಗಿ ಒಂದಾಗಿ ಈ ಪರಿಸ್ಥಿತಿಯನ್ನು ಎದುರಿಸಿಕೊಂಡು ಮುನ್ನುಗ್ಗುವ ಅನಿವಾರ್ಯತೆ ಇದೆ ಎಂದು ಸಚಿವರು ಹೇಳಿದರು. ಇದಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿ ಚಿತ್ರಲೇಖ ಅವರು ಸಚಿವರನ್ನು ಕಂಡು ಮನವಿ ಮಾಡಿದ್ದು, ಇದಕ್ಕೆ ಸಚಿವರು ಸ್ಪಂದಿಸಿದ್ದಾರೆ.