ಕರ್ನಾಟಕ

karnataka

ETV Bharat / state

ದ.ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಉಲ್ಬಣ: ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ - ಖಾಸಗಿ ಆ್ಯಂಬುಲೆನ್ಸ್​ಗೆ ಜಿಪಿಎಸ್

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣ ಸಂಬಂಧ ನಡೆದ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳೊಂದಿಗೆ ಜನರ ಸಹಕಾರ ಅಗತ್ಯವಾಗಿದೆ. ಅಧಿಕಾರಿಗಳು ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್ ಇನ್ನಿತರ ಸೌಲಭ್ಯಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.

meeting
ಪುತ್ತೂರಿನಲ್ಲಿ ಕೋವಿಡ್​ ಸಭೆ

By

Published : May 2, 2021, 8:40 AM IST

ಪುತ್ತೂರು: ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ತಡೆಯುವುದು ಕೇವಲ ಆರೋಗ್ಯ ಇಲಾಖೆಯ ಮಾತ್ರ ಜವಾಬ್ದಾರಿಯಲ್ಲ. ಎಲ್ಲಾ ಇಲಾಖೆಗಳು ಕೈಜೋಡಿಸಿ ಕೊರೊನಾ ತಡೆಯುವ ಕೆಲಸ ನಡೆಯಬೇಕು. ಕೊರೊನಾ ಚಿಕಿತ್ಸೆ ಜೊತೆಗೆ ಅದು ಬಾರದಂತೆ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳಾಗಬೇಕು. ಇದಕ್ಕಾಗಿ ಕಠಿಣ ವರ್ತನೆ ಮತ್ತು ಜಾಗೃತ ಹೆಜ್ಜೆಗಳ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪುತ್ತೂರಿನಲ್ಲಿ ಕೋವಿಡ್​ ಸಭೆ

ಶನಿವಾರ ಪುತ್ತೂರು ಪುರಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.

ಈ ಸಭೆಯಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೋವಿಡ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ನಿಲುವು ತೆಗೆದುಕೊಳ್ಳುವುದು ಕೆಲವು ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಪ್ರತಿಯೊಬ್ಬರೂ ಜಾಗೃತ ಹೆಜ್ಜೆ ಇಡುವ ಮೂಲಕ ಕೊರೊನಾ ಹರಡುವುದನ್ನು ತಪ್ಪಿಸಬೇಕು. ಇದಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳೊಂದಿಗೆ ಜನರ ಸಹಕಾರ ಅಗತ್ಯವಾಗಿದೆ. ಅಧಿಕಾರಿಗಳು ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್ ಇನ್ನಿತರ ಸೌಲಭ್ಯಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಶಾಸಕರೊಂದಿಗೆ ಚರ್ಚೆ ನಡೆಸಿ ಅವರ ಕಾರ್ಯಪಡೆಯ ಸಹಕಾರ ಬೆಂಬಲವನ್ನು ಇಲಾಖೆಗಳು ಪಡೆದುಕೊಳ್ಳಬೇಕು ಎಂದರು.

ಸಚಿವರು ಗ್ರಾಮ ಹಾಗೂ ನಗರ ವ್ಯಾಪ್ತಿಯಲ್ಲಿರುವ ಟಾಸ್ಕ್ ಫೋರ್ಸ್​ ಸಮಿತಿಯ ಸಭೆ ನಡೆಸಿ ಕೊರೊನಾ ಮಾಹಿತಿ ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಪ್ರಗತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಕೋವಿಡ್ ಮೇಲ್ವಿಚಾರಣೆಗೆ ಅಗತ್ಯ ವ್ಯವಸ್ಥೆಗಳನ್ನು ತಕ್ಷಣವೇ ಮಾಡಿಕೊಳ್ಳಿ. ಕೋವಿಡ್ ರೋಗಿಗಳಿಗೆ ಉತ್ತಮ ಆಹಾರ ನೀಡುವ ಜೊತೆಗೆ ಅವರ ಬಗ್ಗೆ ಎಲ್ಲಾ ರೀತಿಯ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು ಎಂದು ಪುತ್ತೂರು ಮತ್ತು ಕಡಬ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಕೋವಿಡ್ ಅನುದಾನದ ಬಗ್ಗೆ ಪುತ್ತೂರಿನಲ್ಲಿ ರೂ. 35 ಲಕ್ಷ ಹಾಗೂ ಕಡಬದಲ್ಲಿ ರೂ. 18 ಲಕ್ಷ ಇದೆ ಎಂದು ಉಭಯ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ತಾನು ತಕ್ಷಣವೇ ಇನ್ನು 25ಲಕ್ಷ ಹಣ ನೀಡುತ್ತೇನೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಉತ್ತಮ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದರು.

ಮನೆಯಿಂದ ಹೊರಬಾರದಂತೆ ನೋಡಿಕೊಳ್ಳಿ:

ಮನೆಯಲ್ಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿರುವ ಕೋವಿಡ್ ಸೋಂಕಿತರು ಮನೆಯಿಂದ ಹೊರಗೆ ಬಂದು ತಿರುಗಾಡುತ್ತಿರುವುದು ಕಂಡು ಬಂದಲ್ಲಿ ಅವರ ಬಗ್ಗೆ ಕಠಿಣ ನಿಲುವು ಕೈಗೊಳ್ಳಿ. ಇಲ್ಲದಿದ್ದಲ್ಲಿ ಕೊರೊನಾ ಮತ್ತಷ್ಟು ಹರಡುವ ಸಾಧ್ಯತೆಗಳಿವೆ. ಕೊರೊನಾ ಸೋಂಕಿತರ ಮನೆಯಲ್ಲಿ ಪ್ರತ್ಯೇಕ ಶೌಚಾಲಯ ಇನ್ನಿತರ ಮೂಲಭೂತ ಸೌಲಭ್ಯಗಳು ಇಲ್ಲದಿದ್ದಲ್ಲಿ ಅವರನ್ನು ತಕ್ಷಣವೇ ಕೋವಿಡ್ ಸೆಂಟರ್‌ಗಳಿಗೆ ದಾಖಲಿಸಿ ಚಿಕಿತ್ಸೆ ನೀಡಿ. ಅವರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಾಗಿದೆ. ಮೇ. 20ರ ಬಳಿಕ ಕೊರೊನಾ ಕೇಸುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಎಲ್ಲರೂ ಎಚ್ಚರದಿಂದ ಇರಬೇಕಾಗಿದೆ ಎಂದು ತಿಳಿಸಿದರು.

ಎಲ್ಲಾ ಖಾಸಗಿ ಆ್ಯಂಬುಲೆನ್ಸ್​ಗೆ ಜಿಪಿಎಸ್:

ಪುತ್ತೂರಿನಲ್ಲಿ ಒಟ್ಟು 10 ವೆಂಟಿಲೇಟರ್‌ಗಳಿದ್ದು, ಇದು ಸರ್ವ ಸಮಯಕ್ಕೂ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹೊರ ಜಿಲ್ಲೆ, ಹಾಗೂ ರಾಜ್ಯಗಳಿಂದ ಆಗಮಿಸಿದವರು ಕಡ್ಡಾಯ ಕೋವಿಡ್ ಸೆಂಟರ್‌ನಲ್ಲಿ ಕ್ವಾರಂಟೈನ್‌ನಲ್ಲಿರಬೇಕು ಎಂದ ಜಿಲ್ಲಾಧಿಕಾರಿಗಳು ಕೊರೊನಾ ಪೀಡಿತರ ಸಾಗಾಟಕ್ಕಾಗಿ 108 ಆ್ಯಂಬುಲೆನ್ಸ್ ಜೊತೆಗೆ ಖಾಸಗಿ ಆ್ಯಂಬುಲೆನ್ಸ್​ಗಳನ್ನು ಉಪಯೋಗಿಸಿಕೊಳ್ಳಲಾಗುವುದು. ರೋಗಿಗಳ ಸಂಚಾರದ ಬಗ್ಗೆ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಖಾಸಗಿ ಆ್ಯಂಬುಲೆನ್ಸ್​ಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಮೃತರ ಶವಸಂಸ್ಕಾರ ವ್ಯವಸ್ಥೆ:

ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರದ ಖರ್ಚುಗಳನ್ನು ಸಂಪೂರ್ಣವಾಗಿ ಸರ್ಕಾರದ ವತಿಯಿಂದಲೇ ಭರಿಸಲಾಗುತ್ತಿದೆ. ಕುಟುಂಬಸ್ಥರಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ. ಜನರಿಗೆ ಹೊರೆಯಾಗದಂತೆ ಶವ ಸಂಸ್ಕಾರದ ಎಲ್ಲಾ ಖರ್ಚುಗಳನ್ನು ಸರ್ಕಾರ ವೆಚ್ಚಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ನರ್ಸ್​​ಗಳ ಕೊರತೆ:

ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರಿನಲ್ಲಿ ಒಟ್ಟು 34 ಆಕ್ಸಿಜನ್ ಸಿಲಿಂಡರ್ ಇದೆ. ಇದರೊಂದಿಗೆ ಒಂದಷ್ಟು ಜಂಬೋ ಸಿಲಿಂಡರ್ ಅಗತ್ಯವಿದೆ. ಇದರೊಂದಿಗೆ ಆಸ್ಪತ್ರೆಗಳಲ್ಲಿ ನರ್ಸ್​​ಗಳ ಕೊರತೆಯಿದ್ದು, ಅದನ್ನು ಶೀಘ್ರ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಖಾಲಿ ಇರುವ ಹುದ್ದೆಗೆ ಲಭ್ಯ ಆಸಕ್ತ ನರ್ಸ್​ಗಳ ಅರ್ಜಿ ಪಡೆದು ಅದನ್ನು ತಮಗೆ ಕಳುಹಿಸಿದಲ್ಲಿ ತಕ್ಷಣವೇ ಹುದ್ದೆ ಮಂಜೂರಾತಿಗೊಳಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಹಲವಾರು ಮಂದಿ ರೈಲು ಇನ್ನಿತರ ವಾಹನಗಳ ಮೂಲಕ ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಆದರೆ ಅವರ ವಾಸ್ತವ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಎಲ್ಲಿ ಹೋಗುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಹೋಂ ಐಸೋಲೇಶನ್ ಬಗ್ಗೆಯೂ ಗಮನಿಸುವವರು ಇಲ್ಲ. ಈ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್​ ಸಮಿತಿ ಮತ್ತು ಫೈಯಿಂಗ್ ಸ್ವ್ಕಾಡ್‌ ಅನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಬೇಕಾಗಿದೆ ಎಂದು ಶಾಸಕರು ತಿಳಿಸಿದರು.

ರಾಜ್ಯ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಮಾತನಾಡಿ, ಕೋವಿಡ್ ಸೋಂಕಿತರು ಹೋಂ ಕ್ವಾರಂಟೈನ್‌ಲ್ಲಿರುವ ಸಂದರ್ಭದಲ್ಲಿ ಹೊರ ಬಾರದಂತೆ ಹಾಗೂ ಇತರ ಮನೆಗಳಿಗೆ ಹೋಗದಂತೆ ಎಚ್ಚರಿಕೆ ಮೂಡಿಸುವ ಕೆಲಸ ಇಲಾಖೆಯಿಂದ ನಡೆಯಬೇಕು ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್, ದ.ಕ.ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ. ಗಾನ ಪಿ ಕುಮಾರ್ ಉಪಸ್ಥಿತರಿದ್ದರು.

ABOUT THE AUTHOR

...view details