ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಶಾಸಕರ ಮಾರ್ಗದರ್ಶನದಂತೆ ಸಹಕಾರ ತತ್ವದ ಅಡಿಯಲ್ಲಿ ಹಡಿಲು ಭೂಮಿಯಲ್ಲಿ 'ಭತ್ತ ಬೆಳೆಯೋಣ ಬಾ ಗದ್ದೆಗಿಳಿಯೋಣ" ಅಭಿಯಾನಕ್ಕೆ ಸಂಬಂಧಿಸಿ, ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭತ್ತ ಬೆಳೆಯೋಣ ಆಂದೋಲನದಲ್ಲಿ ಭಾಗವಹಿಸಿದ ಗ್ರಾಮೀಣ ದೇವಸ್ಥಾನಗಳ ಪ್ರಮುಖರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮೂಲಕ ಸಾಂಕೇತಿಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ದೇವಸ್ಥಾವನ್ನು ಕೇಂದ್ರಿಕೃತವಾಗಿರಿಸಿ ಆರಂಭಗೊಂಡಿರುವ ಈ ಅಭಿಯಾನದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 2 ಸಾವಿರ ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಆರಂಭವಾಗುವ ಸಾಧ್ಯತೆ ಇದೆ ಎಂದರು.
ದ. ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯೋಜನೆ ಕುರಿತು ಮಾಹಿತಿ ನೀಡಿದರು ದೇವಸ್ಥಾನಗಳನ್ನು ಕೇಂದ್ರೀಕರಿಸಿ ಭತ್ತದ ಕೃಷಿ ಮಾಡುವುದು ಹೆಮ್ಮೆಯ ವಿಷಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಗೊಂಡ ಈ ಅಭಿಯಾನ ಇಡೀ ರಾಜ್ಯಕ್ಕೆ ವ್ಯಾಪಿಸಬೇಕು ಎಂದು ಆಶಿಸಿದರು. ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ, ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ, ಆಲಡ್ಕ ಸದಾಶಿವ ದೇವಸ್ಥಾನ, ದೇಂತಡ್ಕ ದೇವಸ್ಥಾನ, ರಣಮಂಗಲ ಸುಬ್ರಾಯ ದೇವಸ್ಥಾನ, ಪುಣಚ ಮಹಿಷಮರ್ದಿನಿ ದೇವಸ್ಥಾನ, ಪಾಣಾಜೆ ಸೇರಿದಂತೆ ಹಲವು ದೇವಸ್ಥಾನಗಳ ಪ್ರಮುಖರಿಗೆ ಸಾಂಕೇತಿಕವಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಯಿತು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್, ಶಾಸಕ ಸಂಜೀವ ಮಠಂದೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂಓದಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸಿದ ಬಸ್ ವಾಪಸ್