ಸುಳ್ಯ:ಕುಟುಂಬದ ರೀತಿಯಲ್ಲಿ ಗ್ರಾಮಸ್ಥರನ್ನು ಸೇರಿಸಿ ಅಭಿವೃದ್ಧಿಗೆ ಪೂರಕವಾದ ಈ ಗ್ರಾಮ ವಾಸ್ತವ್ಯ ರಾಜ್ಯಕ್ಕೆ ಮಾದರಿಯಾಗಿದೆ. ಇಂತಹ ಗ್ರಾಮ ವಾಸ್ತವ್ಯಗಳು ಎಲ್ಲಾ ಜಿಲ್ಲೆಗಳಲ್ಲಿ ನಡೆಯುವಂತಾಗಲಿ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಕಡಬ ತಾಲೂಕಿನ ಕೊಂಬಾರಿನಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಗ್ರಾಮ ವಾಸ್ತವ್ಯ ರಾಜ್ಯಕ್ಕೆ ಮಾದರಿಯಾಗಿದೆ. ಈ ಕಾರ್ಯಕ್ರಮ ನನ್ನ ಕಣ್ಣು ತೆರೆಸಿದೆ. ಇದರಿಂದ ಗ್ರಾಮಗಳ ಸಮಸ್ಯೆಗಳು ಬಗೆಹರಿಯಲಿವೆ. ಇಲಾಖೆಗಳೂ ಚುರುಕು ಪಡೆಯುತ್ತವೆ ಎಂದರು. ಸಚಿವ ಅಂಗಾರ, ನಿಷ್ಠಾವಂತ ಕಾರ್ಯಕರ್ತ ಮಾತ್ರವಲ್ಲದೆ ರಾಜ್ಯದ ಮಾದರಿ ರಾಜಕಾರಣಿ ಎಂದು ನೂತನ ಸಚಿವ ಅಂಗಾರ ಅವರನ್ನು ಈಶ್ವರಪ್ಪ ಹಾಡಿ ಹೊಗಳಿದರು.
ಕೊಂಬಾರು ಗ್ರಾಮದ ನಾಲ್ಕು ರಸ್ತೆಗಳ ಅಭಿವೃದ್ಧಿಗೆ ಬದ್ಧ:ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದ ಹಿಂದುಳಿದ ಪ್ರದೇಶವಾದ ಕೊಂಬಾರು,ಸಿರಿಬಾಗಿಲು ಗ್ರಾಮದ ಜನರ ಬಹು ಬೇಡಿಕೆಯಾದ ನಾಲ್ಕು ರಸ್ತೆಗಳನ್ನು ಅಭಿವೃದ್ಧಿ ಮಾಡಲು ಬದ್ಧರಾಗಿದ್ದೇವೆ ಎಂದರು.