ಮಂಗಳೂರು: ಅಮೆರಿಕದಲ್ಲಿ 10,000 ಮಂದಿಗೆ 7 ಜನರ ಹಾಗೆ ಫಿಸಿಯೋಥೆರಪಿಸ್ಟ್‌ಗಳು ಇದ್ದಾರೆ. ಆದರೆ, ಭಾರತದಲ್ಲಿ ಇರೋದು 10 ಸಾವಿರಕ್ಕೆ 0.05 ಮಂದಿ ಮಾತ್ರ. ವರ್ಷಂಪ್ರತಿ ರಾಜ್ಯದಲ್ಲಿ 10,000 ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಾರೆ. ಆದರೆ, ದೇಶದಲ್ಲಿನ ಜನಸಂಖ್ಯೆಗನುಗುಣವಾಗಿ ಫಿಸಿಯೋಥೆರಪಿಸ್ಟ್‌ಗಳ ಕೊರತೆಯಿದೆ. ಅದನ್ನು ನೀಗಿಸುವ ಪ್ರಯತ್ನ ಆಗಬೇಕಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಫಿಸಿಯೋಥೆರಪಿ ಬೋಧಕರ ಸಂಘದ ವತಿಯಿಂದ ಆಯೋಜಿಸಿರುವ ಮಂಗಳೂರು ಫಿಸಿಯೋಕಾನ್ - 2022ರ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, 19ನೇ ಶತಮಾನದಿಂದೀಚೆಗೆ ವಿಶ್ವಕ್ಕೆ ಫಿಸಿಯೋಥೆರಪಿಯ ಮಹತ್ವ ಅರಿವಾಗಿದೆ. ಭಾರತವು ಪಂಚಕರ್ಮ, ಅಭ್ಯಂಗ ಸ್ನಾನದಂತಹ ಚಟುವಟಿಕೆಗಳ ಮೂಲಕ ಹಿಂದಿನಿಂದಲೂ ಫಿಸಿಯೋಥೆರಪಿ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್, ಪ್ರಕೃತಿ ನೀಡಿರುವ ಸುಂದರ ಜೀವನವು ಪ್ರತಿ ಹಂತಗಳಲ್ಲೂ ಬದಲಾವಣೆ ಆಗುತ್ತಿರುತ್ತದೆ. ಫಿಸಿಯೋಥೆರಪಿ ಕ್ಷೇತ್ರ ಕೂಡ ಆಯಾಯ ಕಾಲಘಟ್ಟಕ್ಕೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿದು ಕೌಶಲ್ಯವನ್ನು ಮೇಲ್ದರ್ಜೆಗೇರಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.