ಪುತ್ತೂರು(ದಕ್ಷಿಣ ಕನ್ನಡ) : ದೇಶದಲ್ಲಿ ಇಂದು ಕೆಲವರು ಹಿಂದುತ್ವದ ಬಗ್ಗೆ ಚರ್ಚೆ ನಡೆಸುತ್ತಾರೆ. ನಾನು ಹಿಂದೂ, ಆದರೆ ನನಗೆ ಹಿಂದುತ್ವ ಬೇಕಿಲ್ಲ ಎನ್ನುವ ಕಮಂಗಿಗಳಿಗೆ ಹಿಂದುತ್ವದ ಭವ್ಯ ಬದುಕಿನ ಮೇಲೆ ನಂಬಿಕೆಯಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಹಿಂದುತ್ವ - ರಾಷ್ಟ್ರೀಯತೆ ಎಂಬ ಸಂಕಲ್ಪದೊಂದಿಗೆ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ಧರಾಮಯ್ಯರ ವಿರುದ್ಧ ಪರೋಕ್ಷವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
’’ಹಿಂದುತ್ವದ ಬಗ್ಗೆ ಮಾತನಾಡುವ ಆ ಮನುಷ್ಯನಿಗೆ ಅವನ ರಕ್ತದ ಬಗ್ಗೆಯೇ ಗೊತ್ತಿಲ್ಲ. ಅಂತವ ಹಿಂದುತ್ವವೇ ಬೇಡ ಎನ್ನುವ ಮಾತನಾಡುತ್ತಾನೆ. ನಿನಗೆ ಬೇಕೋ, ಬೇಡವೋ ಎನ್ನುವುದನ್ನು ಯಾರು ಕೇಳಿದ್ದಾರೆ. ನಿನಗೆ ಹಿಂದುತ್ವ ಇಲ್ಲ ಅನ್ನೋದನ್ನು ನಾವೆಲ್ಲಾ ಪರಿಗಣಿಸಿ ಬಿಟ್ಟಾಗಿದೆ’’ ಎಂದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ’’ಇಂಥವರಿಂದ ನಮಗೆ ಹಿಂದುತ್ವದ ಪಾಠ ಬೇಕಾಗಿಲ್ಲ. ಜಾತಿಯ ಗೂಡನ್ನು ಬಿಟ್ಟು ಹೊರಗೆ ಬಾರದವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಸರಿಯಾಗಿ ಎರಡು ಪುಸ್ತಕವಿಟ್ಟರೆ ಅದನ್ನು ಓದುವ ಯೋಗ್ಯತೆ ಇಲ್ಲದವರು ಹಿಂದುತ್ವದ ಮಾತನಾಡುತ್ತಾರೆ ಎಂದು ಟೀಕಿಸಿದರು. ಇನ್ನು ದೇವಸ್ಥಾನಕ್ಕೆ ಹೇಗೆ ಹೋಗಬೇಕು ಎನ್ನುವ ಪರಿಜ್ಞಾನವಿಲ್ಲದವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಯಾರಿಗೆ ಹಿಂದುತ್ವದ ಭವ್ಯ ಬದುಕಿನ ಮೇಲೆ ನಂಬಿಕೆಯಿಲ್ಲವೋ ಅಂತಹವರು ಹಿಂದೂ ಆಗಿರಲು ಸಾಧ್ಯವಿಲ್ಲ. ವಿವೇಕಾನಂದರು ಹಿಂದುತ್ವದ ಇದೇ ಭವ್ಯ ಬದುಕಿನಲ್ಲಿ ನಡೆದವರು’’ ಎಂದು ಅಭಿಪ್ರಾಯಪಟ್ಟರು.
ಹಿಂದುತ್ವ ಭಾಷಣದ ಸಲಕರಣೆಯಲ್ಲ, ಬದುಕಿನ ಅಂತಃಸತ್ವ: ಜಗತ್ತಿನ ಶ್ರೇಷ್ಠ ವಿಚಾರಗಳನ್ನು ಸ್ವಾಗತಿಸುವ ಸಂಪ್ರದಾಯ ಹಿಂದು ಧರ್ಮದ್ದು, ಇಲ್ಲಿ ನಾವು ಸತ್ಯದ ಇತಿಹಾಸಕ್ಕೆ ಬೆಲೆ ಕೊಡುತ್ತೇವೆ. ಅದಕ್ಕಾಗಿ ಬದುಕಿನಲ್ಲಿ ಉದಾತ್ತ ಚಿಂತನೆಗಳನ್ನು ಪಾಲಿಸಿಕೊಂಡು ದೇಶ ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಮಹಾಪುರುಷರ ಹುಟ್ಟನ್ನು ಸ್ಮೃತಿಯಲ್ಲಿ ಇಟ್ಟುಕೊಂಡು ಆ ದಿನವನ್ನು ವಿಶೇಷವಾಗಿ ಆಚರಿಸುತ್ತೇವೆ ಎಂದರು.
ಹಿಂದುತ್ವವನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಶರೀರ ಬುದ್ಧಿ ಮತ್ತು ಆತ್ಮದ ಜೀವಂತಿಕೆ ಇರುವುದು ನಮ್ಮ ಸಂಪ್ರದಾಯದ ಪಾಲನೆಯಲ್ಲಿ. ನಾವು ಯೋಗ್ಯತೆಯಲ್ಲಿ ಹಿಂದುಗಳಾಗಬೇಕು. ನಮ್ಮ ಸಾಂಪ್ರದಾಯಿಕ ಪರಂಪರೆಯ ಬಗ್ಗೆ ಸುಂದರ ಪರಿಕಲ್ಪನೆ ಇರಬೇಕು. ಉದಾತ್ತ ಚಿಂತನೆಗಳ ಜೊತೆ ಬದುಕಬೇಕು. ಬದುಕಿನ ಓಘ ಮತ್ತು ಶೈಲಿ ಯೋಗ್ಯವಾಗಿದ್ದಾಗ ಕನಸು ಕಾಣಲು ಅರ್ಹರಾಗಿರುತ್ತೇವೆ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.