ಮಂಗಳೂರು: ಪಣಂಬೂರು ಬಂದರಿನ ಎಡ ಪಕ್ಕದ ಬಂದರಿಗೆ ತಾಗಿಕೊಂಡಂತೆ ಮೀನಕಳಿಯ ಎಂಬ ಪ್ರದೇಶ ಇದೆ. ಇಲ್ಲಿ ಮಧ್ಯಮ ವರ್ಗದ ಜನರು, ಕೂಲಿ ಕಾರ್ಮಿಕರು ಸೇರಿ ಸುಮಾರು 2000 ಮಂದಿ ವಾಸವಿದ್ದಾರೆ. ಇವರು ಕೆಲಸಕ್ಕೆ, ಮಂಗಳೂರು ಸಿಟಿಗೆ, ಬೈಕಂಪಾಡಿ ಕೈಗಾರಿಕಾ ವಲಯಕ್ಕೆ ತೆರಳುವಾಗ ನಿತ್ಯವೂ ರೈಲಿನಡಿ ನುಸುಳಿ ಹೋಗಬೇಕಾದ ಪರಿಸ್ಥಿತಿ ಇದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ರೈಲಿನಡಿ ನುಗ್ಗಿ ಓಡಾಡುತ್ತಿರುವ ಜನ ಪಣಂಬೂರು ಎನ್ಎಂಪಿಟಿಗೆ ಅದಿರು ಕೊಂಡೊಯ್ಯುವ ರೈಲು ಪ್ರತಿನಿತ್ಯ ಮೀನಕಳಿಯ ಪ್ರದೇಶಕ್ಕೆ ಹೋಗುವ ಸಂಪರ್ಕ ರಸ್ತೆಗೆ ಅಡ್ಡವಾಗಿ ನಿಲ್ಲುತ್ತದೆ. ಹೀಗಾಗಿ ಈ ಪ್ರದೇಶದ ಜನರು ಮುಖ್ಯರಸ್ತೆಗೆ ಬರಬೇಕಾದಲ್ಲಿ ರೈಲಿನಡಿ ನುಸುಳಿಯೇ ಬರಬೇಕು.
ದಿನಗಟ್ಟಲೇ ನಿಲ್ಲುತ್ತೆ ರೈಲು
ಅದಿರು ಸರಬರಾಜು ಮಾಡಲು ಬರುವ ರೈಲು ದಿನಗಟ್ಟಲೆ, ಕೆಲವೊಮ್ಮೆ ಎರಡು ಮೂರು ದಿನಗಳ ಕಾಲವೂ ನಿಂತು ಲೋಡ್ ಮಾಡುತ್ತದೆ. ಈ ಸಮಯದಲ್ಲಿ ಜನ ಸಂಪರ್ಕ ರಸ್ತೆಗೆ ಹೋಗಲು ಹರಸಾಹಸವನ್ನೇ ಮಾಡಬೇಕು. ಪುರುಷರು ಸಾಮಾನ್ಯವಾಗಿ ರೈಲು ಹತ್ತಿ ಈ ಕಡೆಗೆ ಬಂದರೆ ಮಹಿಳೆಯರು, ಮಕ್ಕಳು ರೈಲಿನಡಿ ನುಸುಳಿ ಬರುತ್ತಾರೆ. ರೈಲು ಗೇಟ್ ಇಲ್ಲದ ಪರಿಣಾಮ ಇದು ಅಪಾಯಕಾರಿಯೂ ಆಗಿದೆ.
ಮುಖ್ಯರಸ್ತೆಗೆ ಏಳು ಕಿಮೀ ಕ್ರಮಿಸಬೇಕಾಗುತ್ತೆ
ಇಲ್ಲಿ ಇನ್ನೊಂದು ಸಂಪರ್ಕ ರಸ್ತೆಯಿದ್ದು, ಅಲ್ಲಿಂದ ಮುಖ್ಯ ರಸ್ತೆಗೆ ಬರಲು ಸುಮಾರು ಏಳು ಕಿ.ಮೀ. ಕ್ರಮಿಸಬೇಕಾಗುತ್ತದೆ. ಆ ಪ್ರದೇಶಕ್ಕೆ ಬಸ್ ಕೂಡಾ ಇಲ್ಲ. ಹಾಗಾಗಿ ಈ ದಿನಗಟ್ಟಲೇ ಗೂಡ್ಸ್ ರೈಲು ಬಂದು ನಿಂತಲ್ಲಿ ಈ ಜನರು ಅದನ್ನು ದಾಟಲು ದೊಡ್ಡ ಸರ್ಕಸ್ ಮಾಡಬೇಕಿದೆ.
ಸುಮಾರು ಆರು ವರ್ಷಗಳಿಂದ ಇಲ್ಲಿನ ಜನ ಈ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮೂರು ವರ್ಷಗಳ ಹಿಂದೆ ಈ ಸಮಸ್ಯೆ ಬಗ್ಗೆ ಪ್ರಧಾನ ಮಂತ್ರಿ ಕಚೇರಿಗೆ ಪತ್ರವನ್ನೂ ಬರೆದಿದ್ದರು. ಅದಕ್ಕೆ 50 ಶೇ. ಹಣ ಎನ್ಎಂಪಿಟಿ, 50 ಶೇ. ಹಣ ರಾಜ್ಯ ಸರ್ಕಾರ ಭರಿಸಿ ರೈಲ್ವೆ ಮೇಲ್ಸೇತುವೆ ಮಾಡಬೇಕೆಂದು ಪ್ರಧಾನ ಮಂತ್ರಿ ಕಚೇರಿಯಿಂದ ಉತ್ತರವೂ ಬಂದಿತ್ತು.
ಆದರೆ, ಅಷ್ಟೊಂದು ಹಣ ರಾಜ್ಯ ಸರ್ಕಾರ ಭರಿಸಲು ಆಗುವುದಿಲ್ಲ, ಪೂರ್ಣ ಹಣ ಎನ್ಎಂಪಿಟಿಯೇ ಭರಿಸಬೇಕೆಂದು ಶಾಸಕ ಭರತ್ ಶೆಟ್ಟಿ ಒತ್ತಡ ಹಾಕಿದ್ದರು. ಪೂರ್ಣ ಹಣ ಭರಿಸಿ ಮೇಲ್ಸೇತುವೆ ಮಾಡಲು ಎನ್ಎಂಪಿಟಿ ಹಿಂದೇಟು ಹಾಕುತ್ತಿದೆ. ಈ ಕಾರಣದಿಂದ ಈ ಪ್ರದೇಶದ ಜನರು ರೈಲಿನಡಿ ನುಸುಳಿಯೇ ಬರಬೇಕಾದ ಪರಿಸ್ಥಿತಿಯೇ ಮುಂದುವರಿದಿದೆ. ಇನ್ನಾದರೂ ದ.ಕ.ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು ಈ ಬಗ್ಗೆ ದೃಷ್ಟಿ ಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.