ಮಂಗಳೂರು :ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅಮೃತಪಾನ ಎಂಬುದು ಜನಜನಿತವಾದ ಮಾತು. ಈ ಅಮೃತಪಾನವನ್ನು ಸರಿಯಾದ ಸಮಯದಲ್ಲಿ ಪಡೆಯಲು ನವಜಾತ ಶಿಶುಗಳು ವಂಚಿತರಾಗುತ್ತಿದ್ದಾರೆ. ಇಂಥಹ ಶಿಶುಗಳಿಗಾಗಿ ಇಲ್ಲಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಆರಂಭಿಸಲಾಗಿದೆ.
ನಗರದ ಲೇಡಿಗೋಷನ್ ಆಸ್ಪತ್ರೆ ಕರಾವಳಿಯ ಪ್ರಸಿದ್ಧ ಸರ್ಕಾರಿ ಹೆರಿಗೆ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಗೆ ಸುಮಾರು ಏಳು ಜಿಲ್ಲೆಗಳಿಂದ ಹೆರಿಗೆಗಾಗಿ ಬರುತ್ತಾರೆ. ತಿಂಗಳಿಗೆ ಸರಾಸರಿ 700 ಹೆರಿಗೆಗಳು ಈ ಆಸ್ಪತ್ರೆಯಲ್ಲಿ ನಡೆಯುತ್ತವೆ. ಈ ಹೆರಿಗೆಗಳಲ್ಲಿ ಅವಧಿಪೂರ್ವ ಮಕ್ಕಳು ಜನಿಸಿ ಎನ್ಐಸಿಯುವಿ ನಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತದೆ.
ಇಂತಹ ಮಕ್ಕಳಿಗೆ ಎದೆಹಾಲು ನೀಡಿದರೆ ಆ ಮಕ್ಕಳು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಇನ್ನೂ ಕೆಲವು ಮಕ್ಕಳು ಹುಟ್ಟುವಾಗಲೆ ತಾಯಿಯನ್ನು ಕಳೆದುಕೊಂಡಿರುವುದು ಶಿಶುಗಳಿಗೆ ಎದೆ ಹಾಲಿನ ಕೊರತೆ ಆಗುತ್ತದೆ. ಇದನ್ನು ತಪ್ಪಿಸಲು ಲೇಡಿಗೋಷನ್ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ಆರಂಭಿಸಲಾಗಿದೆ.