ಉಳ್ಳಾಲ(ದ.ಕ.) :ಕೇರಳದಿಂದ ಬಂದು ಕುಂಜತ್ತೂರು ಮರಿಯಾಶ್ರಮ ಶಾಲೆಯಲ್ಲಿ ಉಳಿದಿರುವ 50ರಷ್ಟು ಕಾರ್ಮಿಕರನ್ನು ನಾಳೆಯೊಳಗೆ ಅವರವರ ಊರಿಗೆ ಕಳುಹಿಸದೇ ಇದ್ದಲ್ಲಿ, ಆದೇಶ ಉಲ್ಲಂಘಿಸಿ, ಗಡಿ ದಾಟಿಸಿ ನಾವೇ ಅವರನ್ನು ಊರಿಗೆ ಮುಟ್ಟಿಸುವ ಕೆಲಸ ಮಾಡಲಿದ್ದೇವೆ. ಪ್ರಕರಣ ಬೇಕಾದರೂ ದಾಖಲಿಸಿ, ಮಾನವೀಯತೆಯೊಂದೇ ನಮ್ಮ ಗುರಿ ಎಂದು ಶಾಸಕ ಯು ಟಿ ಖಾದರ್ ದ.ಕ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪೊಲೀಸರು ತಡೆಹಿಡಿದಿರುವ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 50ರಷ್ಟು ಕಾರ್ಮಿಕರ ದೂರಿಗೆ ಸ್ಪಂದಿಸಿ ಅವರು ಮಾತನಾಡಿದರು.
ಕಾರ್ಮಿಕರನ್ನು ಭೇಟಿಯಾದ ಶಾಸಕ ಯು ಟಿ ಖಾದರ್ ಭೇಟಿ ಸಂದರ್ಭ ಕಂದಾಯ ಇಲಾಖೆ ಸಹಾಯಕ ಆಯುಕ್ತರಿಗೆ ಮೊಬೈಲ್ ಮೂಲಕ ಕರೆ ಮಾಡಿದ ಶಾಸಕರು, "ಕಾರ್ಮಿಕರ ಪರೀಕ್ಷೆ ನಡೆಸಿ, ಕೆಎಸ್ಆರ್ಟಿಸಿ ಬಸ್ ಮೂಲಕ ಅವರ ಊರಿಗೆ ಮುಟ್ಟಿಸುವ ಕೆಲಸ ಮಾಡಿ. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಜತೆಗೆ ಮಾತುಕತೆ ನಡೆಸಿದಾಗ, ಆಯಾಯ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿರುವ ಕುರಿತು ತಿಳಿಸಿದ್ದಾರೆ. ಆದರೆ, ತಲಪಾಡಿ ಗಡಿಭಾಗಕ್ಕೆ ಜಿಲ್ಲಾಧಿಕಾರಿಯಾಗಲಿ, ತಹಶೀಲ್ದಾರ್ ಅವರಾಗಲಿ ಭೇಟಿಯೇ ನೀಡದೆ ವರದಿಯನ್ನು ಕಳುಹಿಸದೇ ಕಾರ್ಮಿಕರನ್ನು ಕಡೆಗಣಿಸಿದ್ದಾರೆ. ಊರಿಗೆ ಕಳುಹಿಸಲು ಕಾನೂನಿನ ತೊಡಕು ಇದ್ದಲ್ಲಿ, ಸರ್ಕಾರದ ವತಿಯಿಂದ ಅವರಿಗೆ ಊಟ, ಮೂಲಭೂತ ವ್ಯವಸ್ಥೆ ಯಾಕೆ ಕಲ್ಪಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ನಾಳೆಯೊಳಗೆ ಅವರನ್ನು ಊರಿಗೆ ಕಳುಹಿಸುವ ಜವಾಬ್ದಾರಿ ನಿರ್ವಹಿಸದೇ ಇದ್ದಲ್ಲಿ ಕಾನೂನು ಕೈಗೆತ್ತಿಕೊಂಡು ನಾವೇ ಗಡಿ ದಾಟಿಸುತ್ತೇವೆ" ಎಂದು ಎಚ್ಚರಿಸಿದರು.
ಕರ್ನಾಟಕ-ಕೇರಳದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಪ್ರತಿಷ್ಠೆ ಜನರ ಮೇಲೆ ಪರಿಣಾಮ ಬೀರಿದೆ. ಕಾರ್ಮಿಕರನ್ನು ಊರಿಗೆ ಕಳುಹಿಸುವ ಜವಾಬ್ದಾರಿ ದ.ಕ ಜಿಲ್ಲಾಡಳಿತದ್ದಾಗಿದೆ. ಆದರೆ, ಅದನ್ನು ಸಮರ್ಥವಾಗಿ ನಿಭಾಯಿಸಲಾಗಿಲ್ಲ. ವಿದೇಶದಿಂದ ಬರುವವರಿಗೆ ಹಡಗು, ವಿಮಾನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದರೂ, ದೇಶದೊಳಗಿನ ಕಾರ್ಮಿಕರಿಗಾಗಿ ಯಾವುದೇ ರೀತಿಯ ತೀರ್ಮಾನ ಪಡೆಯದೇ ಇರುವುದು ದುರಂತ. ಸೋಂಕು ಹರಡುವಿಕೆ ಮತ್ತೆ ವ್ಯಾಪಕ ಆದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಆಗುವುದರಲ್ಲಿ ಸಂಶಯವಿಲ್ಲ. ಅದರ ನಡುವೆ ಕಾರ್ಮಿಕರೆಲ್ಲರೂ ಊರಿಗೆ ಸೇರಬೇಕಾಗಿದೆ. ಆದರೆ, ಸ್ಪಷ್ಟ ನಿಲುವಿಲ್ಲದೆ ಸರ್ಕಾರ ದಿನಕ್ಕೊಂದು ಮಾತನಾಡುತ್ತಿದೆ ಎಂದರು.
ಬಿಜಾಪುರ, ಕೊಪ್ಪಳ, ಗದಗ, ಬಾದಾಮಿ ನಿವಾಸಿ ಕಾರ್ಮಿಕರು ಇದೀಗ ಅತಂತ್ರರಾಗಿದ್ದಾರೆ. ಕಾಸರಗೋಡು ಶಾಲೆಯೊಂದರಲ್ಲಿ ಉಳಿದುಕೊಂಡಿದ್ದ ಮಂದಿಯನ್ನು ಅಲ್ಲಿನ ಪೊಲೀಸರು ಊರಿಗೆ ಹೋಗುವಂತೆ ಅಲ್ಲಿಂದ ಕಳುಹಿಸಿದ್ದಾರೆ. ಆದರೆ, ಕರ್ನಾಟಕ ಗಡಿ ಪ್ರವೇಶಿಸದಂತೆ ಕರ್ನಾಟಕ ಪೊಲೀಸರು ತಡೆ ಹಿಡಿದ ಪರಿಣಾಮ, ಸ್ಥಳೀಯ ಮರಿಯಾಶ್ರಮ ಶಾಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದರು.
ಒಂದು ರೂಮಲ್ಲಿ ಕೂಡಿ ಹಾಕಿದ್ದರು :ಕಾಸರಗೋಡಿನಲ್ಲಿ ಒಂದು ರೂಮಿನಲ್ಲಿ ಕೂಡಿ ಹಾಕಿದ್ದರು. ದೂರ ನಿಲ್ಲುವಂತೆ ಸೂಚಿಸುತ್ತಲೇ ಇದ್ದರು. ಮಕ್ಕಳು ಜತೆಯೇ ಇರುವುದನ್ನು ಆಕ್ಷೇಪಿಸುತ್ತಿದ್ದ ಕೇರಳದವರು, ಅವಾಚ್ಯವಾಗಿ ನಿಂದಿಸಿ ನಿಮ್ಮೂರಿಗೆ ಹೋಗಿ ಎಂದು ಬೈಯ್ಯುತ್ತಲೇ ಇದ್ದರು. ಇದೀಗ ನಡೆದುಕೊಂಡು ಬಂದು ತಲಪಾಡಿ ತಲುಪಿದ್ದೇವೆ. ಮಕ್ಕಳಿಗೆ ಸರಿಯಾದ ಊಟ ಸಿಗುತ್ತಿಲ್ಲ. ದಯವಿಟ್ಟು ನಮ್ಮನ್ನು ಒಮ್ಮೆ ಊರಿಗೆ ಕಳುಹಿಸಿಕೊಡಿ ಎಂದು ಕಾರ್ಮಿಕ ಮಹಿಳೆಯೊಬ್ಬರು ಅಲವತ್ತುಕೊಂಡರು.
ಮೂಲಭೂತ ಸೌಕರ್ಯ ಕೊರತೆಯಾಗುತ್ತಿದೆ :ಮೂಲಭೂತ ವ್ಯವಸ್ಥೆಗಳು ಇಲ್ಲದೇ, ನಾವು ಆತಂಕಕ್ಕೆ ಒಳಗಾಗಿದ್ದೇವೆ. ಮಳೆ ಬಂದಲ್ಲಿ ಶಾಲೆಯ ಜಗಲಿಯಲ್ಲಿ ನಿಲ್ಲಲೂ ಸಾಧ್ಯವಿಲ್ಲ, ತರಗತಿಗಳು ಸೋರುತ್ತಿವೆ. ಉಳಿದುಕೊಳ್ಳುವುದೇ ಅಸಾಧ್ಯ. 50 ಜನರಿಗೆ ಎರಡೇ ಶೌಚಾಲಯವಿದೆ. ಈ ನಡುವೆ ಅಷ್ಟೂ ಜನರಿಗೆ ವ್ಯವಸ್ಥೆ ಕಲ್ಪಿಸುವುದು ಕಷ್ಟ ಎಂದು ಮರಿಯಾಶ್ರಮದ ಭಗಿನಿ ಆತಂಕ ವ್ಯಕ್ತಪಡಿಸಿದರು.