ಬೆಳ್ತಂಗಡಿ(ಮಂಗಳೂರು) :ತಾಲೂಕಿನ ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಅಸಾಧ್ಯವಾದರೂ ಕಳೆದ ಎರಡೂವರೆ ವರ್ಷಗಳಿಂದ ಪ್ರತಿ ಮನೆಯಲ್ಲಿಯೂ ವಿದ್ಯುತ್ ಮೀಟರ್, ವೈಯರಿಂಗ್ ಮಾಡಲಾಗಿದೆ. ಈ ಪ್ರದೇಶಕ್ಕೆ ಮಾಜಿ ಶಾಸಕ ಕೆ. ವಸಂತ ಬಂಗೇರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ವರ್ಷಗಳ ಹಿಂದೆ ನಾವೂರು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪುಲಿತ್ತಡಿ, ಮುತ್ತಾಜೆ, ಅಲ್ಯ, ಎರ್ಮೆಲೆ ಪ್ರದೇಶದ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳಿಗೆ ದೀನ್ ದಯಾಳ್ ವಿದ್ಯುತ್ತೀಕರಣ ಯೋಜನೆಯಡಿ ವಿದ್ಯುತ್ ಮೀಟರ್ ಅಳವಡಿಸಿ ವೈಯರಿಂಗ್ ಮಾಡಲಾಗಿತ್ತು. ಆದರೆ, ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಈ ವಿಚಾರ ತಿಳಿದ ಮಾಜಿ ಶಾಸಕ ವಸಂತ ಬಂಗೇರ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸ್ಥಳದಿಂದಲೇ ವಿದ್ಯುತ್ ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರು. ಈ ವೇಳೆ ಮಳೆಗೆ ಗುಡ್ಡ ಜರಿದು ಹಾನಿಗೊಳಗಾದ ಪದ್ಮನಾಭ ಮಲೆಕುಡಿಯ ಅಲ್ಯ ಮನೆಗೆ ಭೇಟಿ ನೀಡಿ, ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದರು.
ವಿದ್ಯುತ್ ಸಂಪರ್ಕ ಅಸಾಧ್ಯವಾದರೂ ಮೀಟರ್ ಅಳವಡಿಕೆ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕಾನೂನಿನ ಅಡ್ಡಿ ಇದೆ. ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಿಲ್ಲದಿದ್ದರೂ ಸ್ಥಳೀಯ ಗ್ರಾಮ ಪಂಚಾಯತ್ ಯಾರದೋ ಒತ್ತಡಕ್ಕೆ ಮಣಿದು ಕಳೆದ ಚುನಾವಣೆ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ವಿದ್ಯುತ್ ಅಳವಡಿಸಿ ಜನತೆಯನ್ನು ವಂಚಿಸಿದೆ. ನನ್ನ ಅಧಿಕಾರದ ಅವಧಿಯಲ್ಲಿ ನನ್ನ ಗಮನಕ್ಕೆ ಬಾರದೇ ಸ್ಥಳೀಯ ಗ್ರಾಮ ಪಂಚಾಯತ್ ಅನಧಿಕೃತವಾಗಿ ವಿದ್ಯುತ್ ಮೀಟರ್ ಅಳವಡಿಸಿದೆ ಎಂದು ಆರೋಪಿಸಿದರು.