ನೆಲ್ಯಾಡಿ: ಜಿಲ್ಲೆಯ ಹಲವೆಡೆ ಹೆಚ್ಚುವರಿ ಕರೆಂಟ್ ಬಿಲ್ ಬರುತ್ತಿದೆ ಎಂಬ ಆರೋಪವು ವ್ಯಕ್ತವಾಗಿದ್ದು, ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಕೂಡಲೇ ಗಮನ ಹರಿಸುವಂತೆ ಸಮಾನ ಮನಸ್ಕ ವೇದಿಕೆ ನೆಲ್ಯಾಡಿ ಆಗ್ರಹಿಸಿದೆ.
ಸಮಾನ ಮನಸ್ಕ ವೇದಿಕೆಯಿಂದ ಮನವಿ ಈಗಾಗಲೇ ಲಾಕ್ಡೌನ್ನಿಂದ ಜನರು ಸಂಕಷ್ಟ ಎದುರಿಸುತ್ತಿದ್ದು ಇದರ ಬೆನ್ನಲ್ಲೇ ಹಲವು ಮನೆಗಳಿಗೆ ದುಪ್ಪಟ್ಟು ಬಿಲ್ ಬರಲಾರಂಭಿಸಿದೆ ಎನ್ನಲಾಗಿದೆ. ಹಲವು ಬಿಲ್ಗಳಲ್ಲಿ ಇತರೇ ಎಂಬ ರೀತಿಯಲ್ಲಿ ದರ ನಮೂದಿಸಲಾಗಿದ್ದು, ಇದು ಯಾವುದು ಎಂಬುದು ತಿಳಿಯದೇ ಗ್ರಾಹಕರು ಕಂಗಾಲಾಗಿದ್ದಾರೆ.
ದ.ಕ ಜಿಲ್ಲೆಯ ಕಡಬ, ಸುಳ್ಯ, ಪುತ್ತೂರು ತಾಲೂಕಿನ ಹಲವು ಗ್ರಾಮದ ಹಲವು ಮನೆಗಳಿಗೆ ದುಪ್ಪಟ್ಟು ವಿದ್ಯುತ್ ಬಿಲ್ ಬರಲಾರಂಭಿಸಿದೆ. ಈ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು ನೆಲ್ಯಾಡಿ ಸಂತ ಆಲ್ಫೋನ್ಸ್ ಚರ್ಚ್ ಮತ್ತು ಸಮಾನ ಮನಸ್ಕ ವೇದಿಕೆಯಿಂದ ಬಿಲ್ಗಳ ಸಂಗ್ರಹ ಮಾಡಲಾಗುತ್ತಿದೆ.
ನೆಲ್ಯಾಡಿ ಸುತ್ತಮುತ್ತಲಿನ ಜನರಿಗೆ ದುಪ್ಪಟ್ಟು ಬಿಲ್ಗಳನ್ನು ತಂದುಕೊಡಲು ಸಮಾನ ಮನಸ್ಕ ವೇದಿಕೆಯಿಂದ ಮನವಿ ಮಾಡಲಾಗಿದೆ. ಈಗಾಗಲೇ ಸಮಾನ ಮನಸ್ಕರ ವೇದಿಕೆಗೆ ಬಂದಿರುವ ಹಲವು ದುಪ್ಪಟ್ಟು ಬಿಲ್ಗಳು ದುಪ್ಪಟ್ಟು ದರ ಹೊಂದಿದ್ದು, ಯಾವುದೇ ಕಾರಣಕ್ಕೂ ಟ್ಯಾಲಿ ಆಗುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ನೆಲ್ಯಾಡಿ ಭಾಗದ 10ಕ್ಕೂ ಅಧಿಕ ಮನೆಗಳ ಬಿಲ್ಗಳ ಸಂಗ್ರಹ ಮಾಡಲಾಗಿದ್ದು ಎಲ್ಲಾ ಬಿಲ್ಗಳೂ ಸರಿಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ. ಈ ತಿಂಗಳ ಬಿಲ್ ನಲ್ಲಿ ಬರೋಬ್ಬರಿ 500, 1000 ರೂ. ಹೆಚ್ಚಳ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೆಸ್ಕಾಂ ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನಹರಿಸಲು ಸಮಾನ ಮನಸ್ಕ ವೇದಿಕೆ ನೆಲ್ಯಾಡಿ ಮನವಿ ಮಾಡಿದೆ.