ಮಂಗಳೂರು:ನನೆಗುದಿಗೆ ಬಿದ್ದಿದ್ದ ಶುಚಿ ಯೋಜನೆಗೆ ಮತ್ತೆ ಚಾಲನೆ ಸಿಗುತ್ತಿದೆ. ಪದವಿಪೂರ್ವ ಶಿಕ್ಷಣದವರೆಗಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ವಿತರಿಸುವ ಶುಚಿ ಯೋಜನೆಯಲ್ಲಿ ಈ ಬಾರಿ ಹೊಸ ಪ್ರಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕಡಿಮೆ ಖರ್ಚಿನಲ್ಲಿ ಪರಿಸರಸ್ನೇಹಿಯಾಗಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲಾಗುತ್ತಿದೆ.
ಸ್ಯಾನಿಟರಿ ನ್ಯಾಪ್ಕಿನ್ಗೆ ಪರ್ಯಾಯವಾಗಿ ಪರಿಸರಸ್ನೇಹಿ ಮತ್ತು ಹಲವು ವರ್ಷ ಬಾಳಿಕೆ ಬರುವ ಮೆನ್ಸ್ಟ್ರುಯಲ್ ಕಪ್ಗಳನ್ನು ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ. 'ನನ್ನ ಮೈತ್ರಿ' ಹೆಸರಿನಲ್ಲಿ ಹೆಣ್ಣುಮಕ್ಕಳ ಖುತುಸ್ರಾವ ನಿರ್ವಹಣೆಗೆ ಮೆನ್ಸ್ಟ್ರುಯಲ್ ಕಪ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಎರಡು ಜಿಲ್ಲೆಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸೆ.11ರಂದು (ಇಂದು) ಮಂಗಳೂರಿನ ನೆಹರು ಮೈದಾನದಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ. ಪ್ರಾಯೋಗಿಕವಾಗಿ ಉಭಯ ಜಿಲ್ಲೆಗಳ 15 ಸಾವಿರ ಪದವಿ ಪೂರ್ವ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ಗಳನ್ನು ವಿತರಿಸಲು ಯೋಜಿಸಲಾಗಿದೆ.
ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನಿರ್ವಹಣೆಗೆ ಸೂಕ್ತ ಸಾಧನವಾಗಿರುವ ಹಾಗೂ ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್‌ಗಳ ಬಗ್ಗೆ ಮಾಹಿತಿ ನೀಡಿ, ಕಪ್‌ಗಳ ಬಳಕೆಯನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಪ್ರಥಮ ಹಂತದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 300 ಫಲಾನುಭವಿಗಳಿಗೆ ಮೆನ್ಸ್ಟ್ರುಯಲ್ ಕಪ್ಗಳನ್ನು ವಿತರಿಸಿ ಅಧ್ಯಯನ ನಡೆಸಲಾಗಿತ್ತು. ಸುಮಾರು 272 ಹೆಣ್ಣು ಮಕ್ಕಳು ಮುಟ್ಟಿನ ಕಪ್ಗಳನ್ನು ಸ್ವೀಕರಿಸಿ ಯಶಸ್ವಿಯಾಗಿ ಬಳಕೆ ಮಾಡುತ್ತಿದ್ದಾರೆ.
ನ್ಯಾಪ್ಕಿನ್‌ಗಳಿಗೆ ಪರ್ಯಾಯವಾಗಿ ಮೆನ್ಸ್ಟ್ರುಯಲ್ ಕಪ್ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಗಳ ಮಟ್ಟಕ್ಕೆ ಪ್ರಯೋಗ ನಡೆಸಿ, ರಾಜ್ಯಾದ್ಯಂತ ಯೋಜನೆ ವಿಸ್ತರಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಿಂತನೆ ನಡೆಸಿದ್ದಾರೆ. ಮೆನ್ಸ್ಟ್ರುಯಲ್ ಕಪ್ಗಳನ್ನು 8 ಗಂಟೆಗಳವರೆಗೆ ಬಳಸಬಹುದು. ಅಲ್ಲದೇ, ಸೂಕ್ತ ನಿರ್ವಹಣೆಯೊಂದಿಗೆ ಕನಿಷ್ಠ 8-10 ವರ್ಷಗಳವರೆಗೆ ಸಮರ್ಥನೀಯವಾಗಿ ಮರುಬಳಕೆ ಮಾಡಬಹುದು.