ಮಂಗಳೂರು: ಕಚೇರಿಯ ಮಹಿಳಾ ಸಿಬ್ಬಂದಿ ಜೊತೆಗೆ ಕುಷ್ಠರೋಗ ನಿವಾರಣಾ ಅಧಿಕಾರಿ ಚೆಲ್ಲಾಟ ಆಡಿರುವ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಬಂಧನಕ್ಕೊಳಗಾಗಿರುವ ವೈದ್ಯಾಧಿಕಾರಿ ಡಾ ರತ್ನಾಕರ್‌ನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ತುಂಬಾ ದಿನಗಳ ಹಿಂದೆ ನಡೆದಿರುವ ಈ ಪ್ರಕರಣದ ಫೋಟೋ ಮತ್ತು ವಿಡಿಯೋ ನಿನ್ನೆ ವೈರಲ್ ಆಗಿತ್ತು. ಈ ವಿಚಾರ ಈ ಮೊದಲೇ ಇಲಾಖೆಯ ಗಮನಕ್ಕೆ ಬಂದಿದ್ದು, ನವೆಂಬರ್ 8ರಂದೇ ರತ್ನಾಕರ್‌ನನ್ನು ಅಮಾನತು ಮಾಡಲಾಗಿತ್ತು.
ನಿನ್ನೆ ಫೋಟೋ ಮತ್ತು ವಿಡಿಯೋ ವೈರಲ್ ಆದ ಬಳಿಕ ಮಹಿಳಾ ಸಂಘಟನೆಯ ಕಾರ್ಯಕರ್ತೆಯೊಬ್ಬರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಡಾ ರತ್ನಾಕರ್‌ನನ್ನು ಬಂಧಿಸಲಾಗಿತ್ತು. ಡಾ ರತ್ನಾಕರ್‌ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ನೀಡಿದೆ.
ಪ್ರಕರಣ ಸಂಬಂಧ ಪೊಲೀಸರು ಇಂದು ಓರ್ವ ಆಂತರಿಕ ತನಿಖಾ ಸಂಸ್ಥೆಯ ಸದಸ್ಯ ಮೂವರು ಸಂತ್ರಸ್ತೆಯರನ್ನು ವಿಚಾರಣೆ ನಡೆಸಿದ್ದಾರೆ. ತನಿಖೆಯ ವೇಳೆ ಆರೋಪಿ ಸಂತ್ರಸ್ತೆಯರನ್ನು ಕುಂದಾಪುರ, ಮುರ್ಡೇಶ್ವರ, ಮಡಿಕೇರಿ, ಪಿರಿಯಾಪಟ್ಟಣಗಳಿಗೆ ಕರೆದುಕೊಂಡು ಹೋಗಿರುವ ಬಗ್ಗೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.