ಕರ್ನಾಟಕ

karnataka

ETV Bharat / state

ರೈಲು ನಿಲ್ದಾಣಕ್ಕೆ ನಾರಾಯಣಗುರು ಮರುನಾಮಕರಣ ಮಾಡುವ ಮೂಲಕ ಕಾಂಗ್ರೆಸ್​ ಗೊಂದಲ ಸೃಷ್ಟಿ: ಆರೋಪ - rename of ladyhill circle News

ಮಂಗಳೂರಿನ ಲೇಡಿ ಹಿಲ್​ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವುದನ್ನು ತಪ್ಪಿಸಲು ಕಾಂಗ್ರೆಸ್​ ಸಂಚು ರೂಪಿಸುತ್ತಿದೆ. ಹೀಗಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು.

ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ
ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ

By

Published : Dec 4, 2020, 4:00 PM IST

ಮಂಗಳೂರು: ನಗರದಲ್ಲಿರುವ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವುದನ್ನು ತಡೆಯಲು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕೆಂದು ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ಇದು ರಾಜಕಾರಣ ಪ್ರೇರಿತ ಎಂದು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸಿಗರು ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡುವ ಬಗ್ಗೆ ನಿರ್ಣಯಕ್ಕೆ ಬರುವಾಗ ಈ ಬಗ್ಗೆ ಚಕಾರ ಎತ್ತಿಲ್ಲ. ಆದರೆ, ಸ್ಥಾಯಿ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಆಕ್ಷೇಪ ಮಾಡುವ ಮೂಲಕ ವೃತ್ತಕ್ಕೆ ನಾರಾಯಣ ಗುರುಗಳ ಹೆಸರಿಡಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ

ಇದೀಗ ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಅಬ್ದುಲ್ ರವೂಫ್ ಅವರು ಏಕಾಏಕಿಯಾಗಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು ಇಡಬೇಕೆಂದು ನಿರ್ಣಯ ಮಂಡನೆ ಮಾಡಿದ್ದಾರೆ. ಆ ಕಡತದಲ್ಲಿ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ನಾಮಕರಣ ಮಾಡಲು ಯಾವುದೇ ಸಾರ್ವಜನಿಕರ ಒತ್ತಾಯವಿಲ್ಲ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ನಾಮಕರಣ ಮಾಡುವ ಹೆಸರು ಪುನರಾವರ್ತನೆ ಆಗಬಾರದು ಎಂದು 2009ರ ನಿಯಮಾವಳಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಇದೆಲ್ಲವೂ ತಿಳಿದಿದ್ದರೂ ಕಾಂಗ್ರೆಸ್ ಸದಸ್ಯರು ಉದ್ದೇಶಪೂರ್ವಕವಾಗಿ ಲೇಡಿಹಿಲ್ ಬಳಿಯಿರುವ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬೇಕು ಎಂಬ ನಿರ್ಣಯ ಅನುಷ್ಠಾನ ಆಗಬಾರದು. ಅಲ್ಲದೇ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ಆಕ್ಷೇಪ ಸಲ್ಲಿಸಿರುವ ಅಲ್ಲಿನ ವಿದ್ಯಾಸಂಸ್ಥೆಗಳು, ಇನ್ನಿತರ ಸಂಸ್ಥೆಗಳಿಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೆ ಪೂರಕವಾಗುವ ದಾಖಲೆ ಸೃಷ್ಟಿಸುವ ಉದ್ದೇಶದಿಂದ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಲು ನಿರ್ಣಯ ಮಂಡಿಸಿರುವುದು ಸಾಬೀತಾಗಿದೆ ಎಂದು ಪ್ರೇಮಾನಂದ ಶೆಟ್ಟಿ ಆರೋಪಿಸಿದರು.

2003 ರಲ್ಲಿ ಅಂದಿನ ಮೇಯರ್ ಆಗಿದ್ದ ದಿವಾಕರ್ ಲೇಡಿಹಿಲ್ ಬಳಿಯಿರುವ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬೇಕೆಂದು ಮನಪಾದಲ್ಲಿ ನಿರ್ಣಯ ಮಂಡಿಸಿದ್ದರು. ಕಾಂಗ್ರೆಸಿಗರ ಆಕ್ಷೇಪದ ಮಧ್ಯೆ ನಿರ್ಣಯ ಕೈಬಿಡಲಾಗಿತ್ತು. 17 ವರ್ಷಗಳಿಂದ ಲೇಡಿಹಿಲ್ ಬಳಿಯಿರುವ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬೇಕೆಂದು ಸಾಕಷ್ಟು ಸಾರ್ವಜನಿಕ ವಲಯಗಳಿಂದ ಬೇಡಿಕೆಗಳು ಬಂದಿತ್ತು. ಇದೀಗ ನಾವು ಮತ್ತೆ ಆ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡುವ ಸಂದರ್ಭದಲ್ಲಿ ರೈಲ್ವೆ ನಿಲ್ದಾಣಕ್ಕೆ ಅವರ ಹೆಸರಿಡುವ ಗೋಚರ ಆಗುತ್ತಿದೆ. ಇದು ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರಿಡಲು ವಿರೋಧ ವ್ಯಕ್ತಪಡಿಸುವ ಕಾಂಗ್ರೆಸಿಗರ ಹುನ್ನಾರ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.

ABOUT THE AUTHOR

...view details