ಪುತ್ತೂರು:ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಮುಖಂಡೆ ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ನೀಡದಿದ್ದಲ್ಲಿ ಪುತ್ತೂರು ಮಹಿಳಾ ಕಾಂಗ್ರೆಸ್ನ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿಯೂ ಹಾಗೂ ಶಕುಂತಳಾ ಶೆಟ್ಟಿ ಅವರನ್ನು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡಲಾಗುವುದು ಎಂದು ಮಹಿಳಾ ಕಾಂಗ್ರೆಸ್ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾರದ ಅರಸ್, ಮತ್ತು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಶಾಲಕ್ಷಿ ಬನ್ನೂರು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಪುತ್ತೂರು ಮಹಿಳಾ ಕಾಂಗ್ರೆಸ್ ಹೈ ಕಮಾಂಡ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು "ಶಕುಂತಳಾ ಶೆಟ್ಟಿ ಅವರು ತಮ್ಮ ಶಾಸಕತ್ವದ ಅವಧಿಯಲ್ಲಿ ಮಹಿಳೆಯರ ಏಳಿಗೆಗಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಮಹಿಳೆಯರ ರಕ್ಷಣೆಗೆ ಮಹಿಳಾ ಪೊಲೀಸ್ ಠಾಣೆಯನ್ನು ಪುತ್ತೂರಿನಲ್ಲಿ ಆರಂಭಿಸಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಬೆಳೆಯಲು, ಸ್ತ್ರೀ ಶಕ್ತಿ ಸಂಘಟನೆಗಳನ್ನು ಬಲಪಡಿಸಲು ಸ್ತ್ರೀ ಶಕ್ತಿ ಭವನದ ಸ್ಥಾಪನೆ ಮಾಡಿದ್ದಾರೆ. ಮಹಿಳೆಯರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುವ ಮೂಲಕ ಶಕುಂತಳಾ ಶೆಟ್ಟಿ ಮಹಿಳೆಯರಿಗೆ ಭರವಸೆಯ ಆಶಾಕಿರಣವಾಗಿದ್ದಾರೆ ಎಂದು ಹೇಳಿದರು.
ಮಹಿಳಾ ಮತದಾರರಿಗೆ ಅವಮಾನ: ಬಿಜೆಪಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರಿಗೆ ಪುತ್ತೂರು ಮತ್ತು ಸುಳ್ಯದಲ್ಲಿ ಅವಕಾಶ ನೀಡಿದೆ. ಆದರೆ, ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಕಡೆಗಣಿಸುವ ಮೂಲಕ ಸುಳ್ಯ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಇರುವ ಮಹಿಳಾ ಮತದಾರರನ್ನು ಅವಮಾನಿಸುವ ಕೆಲಸದಲ್ಲಿ ತೊಡಗಿದೆ ಎಂದು ಅನಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಈ ವಿಷಯದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.