ಪುತ್ತೂರು (ದಕ್ಷಿಣ ಕನ್ನಡ):ನೆರೆಮನೆಯ ವಿವಾಹಿತ ಮಹಿಳೆಯೊಂದಿಗಿನ ಪ್ರೇಮ ಸಂಬಂಧದ ವಿಚಾರದಲ್ಲಿ ಮರ್ಯಾದೆಗೆ ಅಂಜಿ ವಿವಾಹಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಏ. 3ರಂದು ನೆಟ್ಟಣಿಗೆ ಮೂಡ್ನೂರು ಗ್ರಾಮದ ವಜ್ರಮೂಲೆ ಎಂಬಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ದಿ. ಕೊರಗರವರ ಪುತ್ರ ಶೀನಪ್ಪ(50) ಆತ್ಮಹತ್ಯೆ ಮಾಡಿಕೊಂಡವರು.
ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀನಪ್ಪ ಅವರು ಏ. 2ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದರು, ಮಧ್ಯಾಹ್ನ ಮದ್ಯ ಸೇವನೆ ಮಾಡಿ ಬಂದು ನನಗೆ ಹಾಗೂ ಪುತ್ರಿಗೆ ಬಯ್ಯಲು ಆರಂಭಿಸಿದ್ದರು. ನಂತರ ಸಂಜೆ ಮೋಟಾರು ಸೈಕಲ್‌ನಲ್ಲಿ ಪೇಟೆಗೆ ಹೋಗಿ ಬಂದವರು ತನಗೆ ಏಕಾಏಕಿಯಾಗಿ ಕೈಯಿಂದ ತಲೆಗೆ, ಮುಖಕ್ಕೆ, ಬೆನ್ನಿಗೆ, ಕಾಲಿಗೆ ಹೊಡೆದು ಕಾಲಿನಿಂದ ಸೊಂಟಕ್ಕೆ ತುಳಿದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಆ ವೇಳೆ ನಮ್ಮ 3 ಜನ ಮಕ್ಕಳು ಓಡಿಕೊಂಡು ಬಂದು ಹೊಡೆಯುವುದನ್ನು ತಡೆದಿದ್ದಾರೆ. ಬಳಿಕ ಅವರು ಕೋಪಗೊಂಡು ಬೈಕ್ ಹತ್ತಿ ಪೇಟೆಗೆ ಹೋದರು. ಇದೇ ವೇಳೆಗೆ ನಾನು ಹಾಗೂ ಮಕ್ಕಳು ಪಕ್ಕದ ಮನೆಯ ಮಹಿಳೆ ಬಳಿ ಹೋಗಿ ‘ನನ್ನ ಗಂಡನಲ್ಲಿ ಯಾಕೆ ಮಾತನಾಡುತ್ತೀಯಾ’ ಎಂದು ಕೇಳಿದಾಗ ಆ ಮನೆಯವರು ಹಾಗೂ ತಮ್ಮ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಆ ಬೊಬ್ಬೆ ಕೇಳಿ ನನ್ನ ಗಂಡ ಶೀನಪ್ಪ ನನಗೆ ಹಾಗೂ ಮಕ್ಕಳಿಗೂ ಹೊಡೆಯಲು ಯತ್ನಿಸಿದ್ದಾರೆ. ಆಗ ಅದೇ ಮಕ್ಕದ ಮನೆಯ ಮಹಿಳೆ ತಡೆದಿದ್ದರು.