ಮಂಗಳೂರು: ನಗರದ 4ನೇ ಮೈಲು ಪ್ರದೇಶದಲ್ಲಿ ರಿಕ್ಷಾದಲ್ಲಿ 42.230 ಕೆಜಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲಿನ ಆರೋಪ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ 10 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಬಂಟ್ವಾಳ ತಾಲೂಕಿನ ಕಾರ್ಯಾಡಿ ಮನೆ, ಉರಿಮಜಲು ಕ್ವಾಟರ್ಸ್, ಕುಳ ಗ್ರಾಮ ನಿವಾಸಿ ಅಬ್ದುಲ್ ರಹೀಂ (29) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ವಿವರ:
ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕನೇ ಮೈಲು ರಸ್ತೆಯ ಎ.ಜೆ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿಗೆ ಹೋಗುವ ಖಾಲಿ ಜಾಗವೊಂದರಲ್ಲಿ 2018 ಸೆ.8ರಂದು ಮಧ್ಯಾಹ್ನ 1.45 ಸುಮಾರಿಗೆ ಆರೋಪಿಗಳಾದ ಅಬ್ದುಲ್ ರಹೀಂ, ರಾಜೀವ್ ಎ.ಪಿ. ಹಾಗೂ ಕಲಂದರ್ ಶಾಫಿ ಆಟೋ ರಿಕ್ಷಾ ಹಾಗೂ ಬೈಕ್ನಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದರು.
ಈ ಸಂದರ್ಭ ಅಂದು ಕರ್ತವ್ಯದಲ್ಲಿದ್ದ ಕಾವೂರು ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ್ ಹಾಗೂ ಸಿಬ್ಬಂದಿ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ರಿಕ್ಷಾದಲ್ಲಿ 42.230 ಕೆಜಿಯ 20 ಪ್ಯಾಕೇಟ್ ಗಾಂಜಾ ಪತ್ತೆಯಾಗಿತ್ತು. ತಕ್ಷಣ ಅಬ್ದುಲ್ ರಹೀಂ ಹಾಗೂ ರಾಜೀವ್ ಎ.ಪಿ.ಯನ್ನು ಬಂಧಿಸಿದ ಪೊಲೀಸರು ಗಾಂಜಾ ಸಹಿತ ರಿಕ್ಷಾ ಹಾಗೂ ಬೈಕ್ ಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಬೈಕ್ ನಲ್ಲಿದ್ದ ಆರೋಪಿ ಕಲಂದರ್ ಶಾಫಿ ತಪ್ಪಿಸಿಕೊಂಡಿದ್ದ.