ಕರ್ನಾಟಕ

karnataka

By

Published : Aug 8, 2023, 8:45 AM IST

ETV Bharat / state

ಬಾಂಗ್ ಚಾಕೊಲೇಟ್​​ನಲ್ಲಿ ಗಾಂಜಾ ಅಂಶ ಪತ್ತೆ: ಇಬ್ಬರು ಆರೋಪಿಗಳ ಬಂಧನ

Bong Chocolate: ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಬಾಂಗ್ ಚಾಕೊಲೇಟ್​​ನಲ್ಲಿ ಗಾಂಜಾ ಅಂಶ ಪತ್ತೆಯಾಗಿದೆ. ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Two accused arrested in mangaluru
ಬಂಧಿತ ಆರೋಪಿಗಳು

ಮಂಗಳೂರು: ಇತ್ತೀಚಿಗೆ ನಗರದ ಎರಡು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಬಾಂಗ್ ಚಾಕೊಲೇಟ್​​ನಲ್ಲಿ ಗಾಂಜಾ ಅಂಶ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮನೋಹರ್ ಶೇಟ್ ಮತ್ತು ಬೆಚನ್ ಸೋನ್ನರ್ ಬಂಧಿತ ಆರೋಪಿಗಳು.

ಮಂಗಳೂರು ‌ನಗರ ಉತ್ತರ‌ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಕಾರ್ ಸ್ಟ್ರೀಟ್​​ನಲ್ಲಿ ಪೂಜಾ ಪ್ಯಾಲೇಸ್ ಕಟ್ಟಡದಲ್ಲಿರುವ ವೈಭವ ಪೂಜಾ ಸೇಲ್ಸ್ ಎಂಬ ಅಂಗಡಿಯಲ್ಲಿ ಮನೋಹರ್ ಶೇಟ್ ಎಂಬಾತನಿಂದ 48 ಸಾವಿರ ರೂ. ಮೌಲ್ಯದ ತಲಾ 40 ಬಾಂಗ್ ಚಾಕೊಲೇಟ್ ತುಂಬಿರುವ 300 ಪ್ಯಾಕೇಟ್​​ಗಳನ್ನು ಮತ್ತು 592 ಬಿಡಿ ಚಾಕೊಲೇಟ್​​ಳನ್ನು (ಒಟ್ಟು 12,592 ಬಾಂಗ್ ಚಾಕೊಲೇಟ್​ಗಳನ್ನು) ವಶಪಡಿಸಿಕೊಂಡಿದ್ದರು.

ಅದೇ ರೀತಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಹೈಲ್ಯಾಂಡ್ ಬಳಿ ಗೂಡಂಗಡಿಯಲ್ಲಿ ಬಾಂಗ್ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಆರೋಪಿ ಬೆಚನ್ ಸೋನ್ನರ್ ಎಂಬಾತನಿಂದ 5,500 ರೂ. ಮೌಲ್ಯದ ಬಾಂಗ್ ಚಾಕೊಲೇಟ್​​ಗಳನ್ನು ವಶಪಡಿಸಿಕೊಂಡಿದ್ದರು.

ವಶಪಡಿಸಿಕೊಂಡ ಬಾಂಗ್ ಚಾಕೊಲೇಟ್​​ಗಳನ್ನು ಅದರಲ್ಲಿರುವ ಮಾದಕ ಗಾಂಜಾ ಅಂಶದ ಪತ್ತೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಆ ಚಾಕೊಲೇಟ್​​ಗಳಲ್ಲಿ ಗಾಂಜಾ ಅಂಶ ಇರುವುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿದೆ. ಹಾಗಾಗಿ ಆರೋಪಿತರ ವಿರುದ್ಧ ಎನ್​​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಲಯಲಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ. ಆರೋಪಿತರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

170 ಡ್ರೈವಿಂಗ್ ಲೈಸೆನ್ಸ್ ರದ್ದಿಗೆ ಶಿಫಾರಸು:ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಮಂಗಳೂರು ನಗರದಲ್ಲಿ 170 ವಾಹನ ಚಾಲಕರ ಚಾಲನಾ ಪರವಾನಗಿ ರದ್ದುಪಡಿಸಲು ನಗರ ಪೊಲೀಸರು ಶಿಫಾರಸು ಮಾಡಿದ್ದಾರೆ. 2022ರ ಜುಲೈ 27 ರಿಂದ 2023ರ ಜೂನ್ 6ವರೆಗೆ ಭಾರತೀಯ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ-1988/2019 ಅಡಿ ಸಂಚಾರ ಉಲ್ಲಂಘಿಸಿದ ಪ್ರಕರಣಗಳಲ್ಲಿ ಒಟ್ಟು 170 ವಾಹನ ಚಾಲಕರ ಅನುಜ್ಞಾ ಪತ್ರ (DL) ಅಮಾನತು ಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಪಘಾತ ಪ್ರಕರಣಗಳಲ್ಲಿ 24, ಓವರ್ ಸ್ಪೀಡ್ ಮತ್ತು ನಿರ್ಲಕ್ಷ್ಯ ಪ್ರಕರಣಗಳಲ್ಲಿ 12, ಸರಕು ಸಾಗಣೆ ವಾಹನ ಪ್ರಯಾಣಿಕರನ್ನು ಸಾಗಿಸುವ ಪ್ರಕರಣಗಳಲ್ಲಿ 11, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ ಪ್ರಕರಣಗಳಲ್ಲಿ 5, ಕೆಂಪು ಸಿಗ್ನಲ್ ಜಂಪಿಂಗ್ ಪ್ರಕರಣಗಳಲ್ಲಿ 7, ಟ್ರಿಪಲ್ ರೈಡಿಂಗ್ ಪ್ರಕರಣಗಳಲ್ಲಿ 3 , ಹೆಲ್ಮೆಟ್ ಕೇಸ್ ಇಲ್ಲದೇ ಸವಾರಿ ಪ್ರಕರಣಗಳಲ್ಲಿ 95, ಸೀಟ್ ಬೆಲ್ಟ್ ಇಲ್ಲದ ಪ್ರಕರಣಗಳಲ್ಲಿ 13 ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲು ಶಿಫಾರಸು ಮಾಡಲಾಗಿದೆ.

ಕಳೆದ 11 ದಿನಗಳಲ್ಲಿ ವಾಹನ ಅಪಘಾತಗಳಿಂದ ಪ್ರಾಣ ಹಾನಿಯಾಗುವುದನ್ನು ತಪ್ಪಿಸುವ, ವಾಹನಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಸಾಗಿಸುವ ಕುರಿತು 89 ಪ್ರಕರಣಗಳು ಹಾಗೂ ಏಕಮುಖ ಸಂಚಾರಕ್ಕೆ ವಿರುದ್ಧವಾಗಿ ವಾಹನ ಚಲಾಯಿಸುವ ಬಗ್ಗೆ 6 ಪ್ರಕರಣಗಳನ್ನು ದಾಖಲಿಸಲಾಗಿದೆ.

ಅದೇ ರೀತಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಪ್ರತಿ ತಿಂಗಳು ನಡೆಸಲಾಗುವ ಫೋನ್ - ಇನ್ ಕಾರ್ಯಕ್ರಮ, ಸಂಚಾರ ಸಂಪರ್ಕ ದಿವಸಗಳಲ್ಲಿ ಸಾರ್ವಜನಿಕರು ದೂರಿರುವಂತೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಅದರಂತೆ 371 ತಪ್ಪು ಪಾರ್ಕಿಂಗ್​ಗಾಗಿ ವೀಲ್ ಕ್ಲಾಂಪ್ ಹಾಕಲಾಗಿದೆ. 31 ಕರ್ಕಶ ಹಾರ್ನ್ 23 ಟಿಂಟ್ ಗ್ಲಾಸ್ ತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

ಇದನ್ನೂ ಓದಿ:ಮಂಗಳೂರಿನಲ್ಲಿ 100 ಕೆಜಿ ಡ್ರಗ್ಸ್ ಲೇಪಿತ ಚಾಕೊಲೇಟ್ ವಶ

ABOUT THE AUTHOR

...view details