ಮಂಗಳೂರು:ಒಮಿಕ್ರಾನ್ ಸೋಂಕು ಭೀತಿಯಿಂದ ಸರ್ಕಾರ ಅವೈಜ್ಞಾನಿಕ ಲಾಕ್ಡೌನ್ ಜಾರಿಗೊಳಿಸುತ್ತಿರುವ ಪರಿಣಾಮ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ, ವಾರಾಂತ್ಯ ಲಾಕ್ಡೌನ್ ಮಾಡದೆ ಬೇರೆ ದಿನಗಳಲ್ಲಿ ಲಾಕ್ಡೌನ್ ಮಾಡಿ ನಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರುಗೊಳಿಸಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವ್ಯಾಪಾರ ವ್ಯವಹಾರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಸಂಘಟನೆಯ ಸದಸ್ಯ ಸಂತೋಷ್ ಕಾಮತ್ ಮಾತನಾಡಿ, ನಾವು ಲಾಕ್ಡೌನ್ ವಿರೋಧಿಸುತ್ತಿಲ್ಲ. ದಿನನಿತ್ಯದ ಅವಶ್ಯಕ ಅಂಗಡಿಗಳಿಗೆ ಎಲ್ಲಾ ದಿನಗಳಲ್ಲಿ ಅವಕಾಶ ಕೊಡುವಂತೆ ವಾರಾಂತ್ಯದ ದಿನಗಳಲ್ಲಿಯೇ ವಹಿವಾಟುಗಳಾಗುವ ಇತರ ಉದ್ದಿಮೆ, ವ್ಯವಹಾರಗಳಿಗೆ ಅವಕಾಶ ನೀಡಿ ವಾರದ ಇತರ ದಿನಗಳಲ್ಲಿ ಲಾಕ್ಡೌನ್ ಮಾಡಿ. ಈ ರೀತಿಯಲ್ಲಿ ದಿನ ಬಿಟ್ಟು ದಿನ ವ್ಯವಹಾರಕ್ಕೆ ಅವಕಾಶ ನೀಡಿದ್ದಲ್ಲಿ ನಮ್ಮ ವ್ಯವಹಾರ ತಕ್ಕಮಟ್ಟಿಗೆ ನಡೆಯಲು ಸಾಧ್ಯ. ಇಲ್ಲದಿದ್ದಲ್ಲಿ ಒಂದು ಬಾರಿ ನಮ್ಮ ವ್ಯವಹಾರ ನೆಲಕಚ್ಚಿದ್ದಲ್ಲಿ ಮತ್ತೆ ಮೇಲೇಳುವುದು ಕಷ್ಟಸಾಧ್ಯ ಎಂದರು.
ವಾರಾಂತ್ಯ ದಿನಗಳಲ್ಲಿಯೇ ವ್ಯವಹಾರಗಳಾಗುವ ಬ್ಯೂಟಿ ಪಾರ್ಲರ್, ಫೋಟೊಗ್ರಾಫರ್ಸ್, ಶಾಮಿಯಾನ, ಗಾರ್ಮೆಂಟ್ಸ್ ಟೆಕ್ಸ್ಟೈಲ್ಸ್, ಸೌಂಡ್ ಆ್ಯಂಡ್ ಲೈಟ್ಸ್ ಮುಂತಾದ ಉದ್ದಿಮೆಗಳನ್ನು ವಾರಾಂತ್ಯ ಕರ್ಫ್ಯೂ ನೆಪದಲ್ಲಿ ಸ್ಥಗಿತಗೊಳಿಸಿದರೆ ಇದನ್ನೇ ನಂಬಿದವರು ಆರ್ಥಿಕವಾಗಿ ದಿವಾಳಿಯಾಗುತ್ತಾರೆ. ಈಗಾಗಲೇ, ಸಾಕಷ್ಟು ಮಂದಿ ಆರ್ಥಿಕ ಸಂಕಷ್ಟದಿಂದ ನೆಲಕಚ್ಚಿ ವ್ಯವಹಾರವನ್ನೇ ಸ್ಥಗಿತಗೊಳಿಸಿದ್ದಾರೆ. ಸಾಕಷ್ಟು ಮಂದಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಳಲು ತೋಡಿಕೊಂಡರು.