ಕರ್ನಾಟಕ

karnataka

ETV Bharat / state

ಮಂತ್ರಮಾಂಗಲ್ಯಕ್ಕೆ ಸಾಕ್ಷಿಯಾದ ಮಂಗಳೂರು.. ನಾಡಗೀತೆ, ಕನ್ನಡದಲ್ಲಿ ಪ್ರತಿಜ್ಞೆಯೊಂದಿಗೆ ಹೊಸ ಜೀವನ ಆರಂಭ - ನಾಡಗೀತೆ, ಕನ್ನಡದಲ್ಲಿ ಪ್ರತಿಜ್ಞೆ

ಕುವೆಂಪು ಅವರು ಪ್ರತಿಪಾದಿಸಿದ ಮಂತ್ರಮಾಂಗಲ್ಯದ ವಿಶಿಷ್ಟ ಶೈಲಿಯಲ್ಲಿ ವಿವೇಕ ಗೌಡ ಮತ್ತು ಶಿವಾನಿ ಶೆಟ್ಟಿ ಮದುವೆಯಾದರು. ಜೊತೆಗೆ ಕನ್ನಡದಲ್ಲಿ ಪ್ರತಿಜ್ಞೆ ಸ್ವೀಕಾರ ಮತ್ತು ನಾಡಗೀತೆ ಹಾಡುವ ಮೂಲಕ ವಿಶಿಷ್ಟತೆ ಮೆರೆದರು.

Mantra Mangalya marriage held at Mangaluru
ಮಂತ್ರಮಾಂಗಲ್ಯಕ್ಕೆ ಸಾಕ್ಷಿಯಾದ ಮಂಗಳೂರು

By

Published : Apr 5, 2022, 5:39 PM IST

ಮಂಗಳೂರು: ಮದುವೆಯೆಂದರೆ ಅದ್ಧೂರಿಯಾಗಿ ಎಲ್ಲರ ಗಮನ ಸೆಳೆಯಬೇಕು ಎಂದು ಬಯಸುವವರೇ ಅಧಿಕ. ಆದರೆ, ಮಂಗಳೂರಿನಲ್ಲಿ ನಡೆದ ಸರಳ ಮದುವೆಯೊಂದು ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಚಕರ ಪೂಜೆಗಳು, ಮಂತ್ರಘೋಷಗಳಿಲ್ಲದೇ ಮಂತ್ರಮಾಂಗಲ್ಯದ ಮೂಲಕ ವಿವಾಹವಾಗಿ ಕಡಲತಡಿಯ ಜೋಡಿಯೊಂದು ಗಮನ ಸೆಳೆದಿದೆ.

ಸುರತ್ಕಲ್​ನ ಹೋಂ ಸ್ಟೇಯಲ್ಲಿ ವಿವೇಕ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬುವವರು ನಾಡಗೀತೆ, ಪರಿಸರ ಸ್ನೇಹಿ ಆದರ್ಶಗಳ ಜೊತೆ ಹೊಸಜೀವನ ಆರಂಭಿಸಿದರು. ಲ್ಯಾಂಡ್ ಲಿಂಕ್ಸ್​ನ ವಿವೇಕಗೌಡ ಛಾಯಾಗ್ರಾಹಣ ಮತ್ತು ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಶಿವಾನಿ ಶೆಟ್ಟಿ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ವಿವಾಹ ಸಮಾರಂಭದಲ್ಲಿ ಕೇವಲ 100 ಮಂದಿಗೆ ಮಾತ್ರ ಆಹ್ವಾನವಿತ್ತು.

ಬಂದವರೆಲ್ಲರೂ ಮದುವೆಯಲ್ಲಿ ಭಾಗವಹಿಸುವ ಜೊತೆಗೆ ಆದರ್ಶಗಳನ್ನು ಕಾಣುವಂತಾಗಿದೆ. ವಧು - ವರರು ತಾವು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳ್ವೆ ನಡೆಸುವ, ತಮ್ಮ ಜೀವನ ರೂಪಿಸಿಕೊಳ್ಳುವ ಬಗ್ಗೆ ಕನ್ನಡದಲ್ಲಿ ಪ್ರತಿಜ್ಞೆ ತೆಗೆದುಕೊಂಡು ಹಾರ ಬದಲಾವಣೆ, ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು. ಸಾಮಾಜಿಕ ಚಿಂತಕ ವಿವೇಕಾನಂದ ಎ.ಚ್.ಕೆ ವಿವಾಹ ಕಾರ್ಯ ನಡೆಸಿಕೊಟ್ಟರು.

ಮಂತ್ರಮಾಂಗಲ್ಯಕ್ಕೆ ಸಾಕ್ಷಿಯಾದ ಮಂಗಳೂರು: ನಾಡಗೀತೆ, ಕನ್ನಡದಲ್ಲಿ ಪ್ರತಿಜ್ಞೆಯೊಂದಿಗೆ ಹೊಸಜೀವನ ಆರಂಭ

ಬಸವಣ್ಣ, ಕುವೆಂಪು ಆದರ್ಶ:ವರ ವಿವೇಕ್ ಗೌಡ ಬಸವಣ್ಣ, ಕುವೆಂಪು ಅವರ ಆದರ್ಶಗಳನ್ನು ಪಾಲಿಸುವವರು. ಅವರ ಚಿಂತನೆಯನ್ನು ಮೈಗೂಡಿಸಿಕೊಂಡವರು. ಕುವೆಂಪು ಅವರು ಪ್ರತಿಪಾದಿಸಿದ ಮಂತ್ರಮಾಂಗಲ್ಯದ ವಿಶಿಷ್ಟ ಶೈಲಿಯಲ್ಲಿ ಮದುವೆಯಾದ ಅವರು ಈ ಮದುವೆಯಲ್ಲಿ ನಾಡಗೀತೆ ಹಾಡುವ ಮೂಲಕ ವಿಶಿಷ್ಟತೆ ಮೆರೆದರು.

ಅಲ್ಲದೇ, ಮದುವೆಗೆ ಬಂದವರೆಲ್ಲರೂ ನಾಡಗೀತೆ ಹಾಡಬೇಕು ಎಂಬ ಅವರ ಪ್ರೀತಿಯ ಷರತ್ತಿಗೆ ಎಲ್ಲರೂ ಒಪ್ಪಿ ನಾಡಗೀತೆ ಹಾಡಿದರು. ನಾಡಗೀತೆಯ ಅರ್ಥವನ್ನು ಮಾಡುವ ಮೂಲಕ ಸೌರ್ಹಾರ್ದತೆ ನೆಲೆಸಬೇಕು ಎಂಬುವುದು ವಿವೇಕ್ ಗೌಡ ಆಶಯ.

ವ್ಯರ್ಥ ಖರ್ಚಿಲ್ಲದ ಮದುವೆ:ಈ ಮದುವೆಯು ವರದಕ್ಷಿಣೆ ತೆಗೆದುಕೊಳ್ಳದೇ, ಆಡಂಬರವಿಲ್ಲದೆ ಮದುವೆ ನಡೆಯಿತು. ವ್ಯರ್ಥ ಖರ್ಚು ಮಾಡದೆ ಸರಳವಾಗಿ ಜರುಗಿತು. ಇಡೀ ಸಮಾರಂಭಗಳಲ್ಲಿ ಪರಿಸರಕ್ಕೆ ಹಾನಿಕಾರಕ ವಸ್ತುಗಳ ಬಳಕೆ ಇರಲಿಲ್ಲ. ಪರಿಸರಕ್ಕೆ ಪೂರಕ ಮತ್ತು ವೇದಿಕೆಯ ಅಲಂಕಾರವನ್ನು ವಧು ಶಿವಾನಿ ಅವರೇ ಸಿದ್ಧ ಪಡಿಸಿದ್ದರು. ವಧು-ವರರಿಗೆ ಅಕ್ಷತೆ ಹಾಕಲು ಅಕ್ಕಿಯ ಬದಲು ಹೂವುಗಳ ಎಸಳುಗಳ ಬಳಸಲಾಯಿತು.

ಅಲ್ಲದೇ, ಆಹಾರ ಪೋಲು ಮಾಡದಂತೆ ಪ್ರತಿಜ್ಞೆ ಸಹ ಮಾಡಲಾಯಿತು. ಮದುವೆಗೆ ಬಂದವರಿಗೆ ಸಸ್ಯಹಾರಿ,‌ ಮಾಂಸಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಊಟಕ್ಕೂ ಮೊದಲು ಜೀವನದಲ್ಲಿ ಅನ್ನ ಪೋಲು ಮಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಪಡೆದುಕೊಂಡದ್ದು ವಿಶಿಷ್ಟವಾಗಿತ್ತು. ಪ್ಲಾಸ್ಟಿಕ್ ಲೋಟದ ಬದಲಿಗೆ ಸ್ಟೀಲ್ ಲೋಟಗಳ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ:ಮದುವೆಗೆ ಜಾತಿ ವಿರೋಧ : ಸಾವಿನಲ್ಲೂ ಒಂದಾದ ಪ್ರೇಮಿಗಳು

ABOUT THE AUTHOR

...view details