ಬಂಟ್ವಾಳ (ದಕ್ಷಿಣಕನ್ನಡ):ಕರಾವಳಿ ಭಾಗದ ರೈತರ ಕೃಷಿ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ನಾಶ ಮಾಡುವ ಕಾರ್ಯ ಮಾಡಲಾಗುತ್ತಿದೆ. ಕೃಷಿ ಭೂಮಿಯನ್ನು ಹಾಳು ಮಾಡಿ ರೈತರನ್ನು ಒಕ್ಕಲೆಬ್ಬಿಸಿ, ಕೈಗಾರಿಕಾ ಪ್ರದೇಶ ಮಾಡುವ ಹುನ್ನಾರವಿದ್ದರೆ ತಕ್ಷಣ ಕೈಬಿಡಬೇಕು. ಯೋಜನೆಯ ಸಮಗ್ರ ಮಾಹಿತಿಯನ್ನು ಬಹಿರಂಗಪಡಿಸಿ, ರೈತಾಪಿ ವರ್ಗಕ್ಕೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಯೋಜನೆ ಜಾರಿ ಮಾಡುವ ಮೊದಲು ರೈತರನ್ನು ಕರೆದು ಸ್ಥಳೀಯ ಮಟ್ಟದಲ್ಲಿ ಮಾತುಕತೆ ಮಾಡದೇ ಹೋದಲ್ಲಿ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಕೃಷಿಭೂಮಿ ಹಾಗೂ ಖಾಸಗಿ ಭೂಮಿಯಲ್ಲಿ ಬೃಹತ್ ವಿದ್ಯುತ್ ಮಾರ್ಗ ರಚನೆಯ ಕಾರ್ಯವನ್ನು ಕೈಬಿಟ್ಟು, ಚತುಷ್ಪಥ ಹೆದ್ದಾರಿಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ತೆಗೆದುಕೊಂಡು ಹೋಗುವ ಕಾರ್ಯ ಮಾಡಬೇಕು. ಇದಕ್ಕೆ ಸಮಸ್ಯೆಯಾಗುವುದಾದರೆ ಸಮುದ್ರ ಮಾರ್ಗದ ಮೂಲಕ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನೀರಿನ ಒಳಗೆ ಕೇಬಲ್ ಬಳಸಿಕೊಂಡು ವಿದ್ಯುತ್ ತೆಗೆದುಕೊಂಡು ಹೋಗಬೇಕೆಂದು ಆಗ್ರಹಿಸಿದರು.