ಮಂಗಳೂರು:ಉಳ್ಳಾಲ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಮೃತದೇಹ ಹತ್ತು ದಿನಗಳ ಬಳಿಕ ಇಂದು ಪತ್ತೆಯಾಗಿದೆ.
ಕಡಬ ತಾಲೂಕಿನ ನೂಜಿ ಬಾಳ್ತಿಲ ನಿವಾಸಿ ಸದಾಶಿವ (26) ಎಂಬ ಯುವಕ ಆಗಸ್ಟ್ 16ರ ರಾತ್ರಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಸಮುದ್ರ ದಡದಿಂದ 12 ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ಇಂದು ಕೋಸ್ಟ್‌ಗಾರ್ಡ್ ಸಿಬ್ಬಂದಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಎನ್‌ಎಂಪಿಟಿ ಬಂದರಿನಿಂದ ಸುಮಾರು 12 ಕಿ.ಮೀ. ದೂರ ಸಮುದ್ರದಲ್ಲಿ ಶವವೊಂದು ತೇಲುತ್ತಿತ್ತು. ಕೂಡಲೇ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಪರಿಶೀಲನೆ ನಡೆಸಿದಾಗ ನಾಪತ್ತೆಯಾದ ಯುವಕ ಸದಾಶಿವ ಎಂದು ತಿಳಿದುಬಂದಿದೆ. ಮೃತದೇಹದಲ್ಲಿದ್ದ ರೈನ್‌ಕೋಟ್, ಕೈಯಲ್ಲಿ ಹಾಕಿದ್ದ ಕಡಗ ಮತ್ತು ಟ್ಯಾಟೂಗಳು ನೋಡಿ ಮೃತದೇಹ ಸದಾಶಿವರದ್ದೇ ಎಂದು ಸಂಬಂಧಿಕರು ಗುರುತು ಹಿಡಿದಿದ್ದಾರೆ.
ಸದಾಶಿವ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ನೀರು ಹಾಕುವ ಕೆಲಸ ನಿರ್ವಹಿಸುತ್ತಿದ್ದ. ಆಗಸ್ಟ್ 16ರ ರಾತ್ರಿ 9:30ಕ್ಕೆ ಕೆಲಸ ಮುಗಿಸಿ ಬೈಕ್‌ನಲ್ಲಿ ಜಪ್ಪಿನಮೊಗರು ಬಳಿ ಇರುವ ಬಾಡಿಗೆ ಮನೆಗೆ ಹೊರಟು ಹೋಗಿದ್ದ. ಆ ಬಳಿಕ ಮನೆಗೂ ಹೋಗದೆ ರೈಲ್ವೆ ನಿಲ್ದಾಣಕ್ಕೂ ಬಾರದೆ ನಾಪತ್ತೆಯಾಗಿದ್ದ. ಬಳಿಕ ಆತನ ಬೈಕ್ ಉಳ್ಳಾಲ ಸೇತುವೆ ಬಳಿ ಪತ್ತೆಯಾಗಿತ್ತು. ಅದರಲ್ಲಿದ್ದ ದಾಖಲೆಯನ್ನು ಪರಿಶೀಲಿಸಿದಾಗ ಸದಾಶಿವನ ವಿಳಾಸ ತಿಳಿದು ಬಂದಿತ್ತು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಇಂದು ಯುವಕ ಶವವಾಗಿ ಪತ್ತೆಯಾಗಿದ್ದಾನೆ.