ಮಂಗಳೂರು: ನವರಾತ್ರಿ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವರಾತ್ರಿಯಲ್ಲಿ ನವದುರ್ಗೆಯರನ್ನು ಆರಾಧನೆ ಮಾಡಲಾಗುತ್ತದೆ. ಆದರೆ ಮಂಗಳೂರಿನ ಕುದ್ರೋಳಿ ದಸರಾದಲ್ಲಿ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. 1930 ರಿಂದ ಕುದ್ರೋಳಿ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ನಡೆದುಕೊಂಡು ಬಂದಿದೆ. ಈ ಹಿಂದೆ ನವರಾತ್ರಿ ಸಂದರ್ಭದಲ್ಲಿ ಕೇವಲ ಶಾರದೆ ಪ್ರತಿಷ್ಠಾಪಿಸಿ ಆರಾಧನೆ ನಡೆಸಲಾಗುತ್ತಿತ್ತು. ಆದರೆ, 1990 ರಿಂದೀಚೆಗೆ ಕುದ್ರೋಳಿಯಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬರಲಾಗುತ್ತಿದೆ.
ಕುದ್ರೋಳಿ ದೇವಸ್ಥಾನದ ಖಜಾಂಚಿ ಪದ್ಮರಾಜ್ ಆರ್ ಹೇಳುವ ಪ್ರಕಾರ, ಕುದ್ರೋಳಿ ದೇವಾಲಯದ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಪಶ್ಚಿಮ ಬಂಗಾಲಕ್ಕೆ ತೆರಳಿದ್ದ ವೇಳೆ ಅಲ್ಲಿ ನವರಾತ್ರಿಗೆ ನವದುರ್ಗೆಯರನ್ನು ಆರಾಧಿಸುವ ಪದ್ದತಿ ಕಂಡು ಆಕರ್ಷಿತರಾದರು. ಅದರಂತೆ ಕುದ್ರೋಳಿಯಲ್ಲೂ ನವರಾತ್ರಿಯ ಸಂದರ್ಭದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಆರಾಧಿಸಲು ಪ್ರಾರಂಭಿಸಿದರು.
ಜೊತೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 50 ವರ್ಷ ತುಂಬಿದ ವರ್ಷದಲ್ಲಿ ಭಾರತಮಾತೆ ಆರಾಧಿಸುವ ನಿಟ್ಟಿನಲ್ಲಿ ಆದಿಶಕ್ತಿದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ನವದುರ್ಗೆಯರು, ಆದಿಶಕ್ತಿ, ಶಾರದೆ ಮತ್ತು ವಿಘ್ನನಿವಾರಕ ಗಣಪತಿ ಮೂರ್ತಿಗಳನ್ನು ಒಟ್ಟಾಗಿ ಆರಾಧಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯ ದಸರಾ ಮೆರವಣಿಗೆ ಶೋಭಾಯಾತ್ರೆಯಲ್ಲಿ ಈ ದೇವರ ಮೂರ್ತಿಗಳನ್ನು ನಗರದಲ್ಲಿ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ದು ಬಳಿಕ ಕುದ್ರೋಳಿಯ ಕೊಳದಲ್ಲೇ ನಿಮ್ಮಜ್ಜನ ಮಾಡಲಾಗುತ್ತದೆ ಎಂದು ಹೇಳಿದರು.
1990 ರಿಂದ ಕುದ್ರೋಳಿ ದೇವಸ್ಥಾನದಲ್ಲಿ ಶಾರದೆ ಜೊತೆಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟೆ, ಕೂಷ್ಮಾಂಡಿನಿ, ಸ್ಕಂದ ಮಾತ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ದಿಧಾತ್ರಿಯರ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬರಲಾಗುತ್ತಿದೆ. ಇದರ ಜೊತೆಗೆ ಆದಿಶಕ್ತಿ, ಶಾರದಾ ಮಾತೆ ಮತ್ತು ಗಣಪತಿ ದೇವರ ಆರಾಧನೆಯು ನಡೆಯುತ್ತದೆ. ಇಲ್ಲಿನ ನವರಾತ್ರಿ ಆಚರಣೆ ಮಂಗಳೂರು ದಸರಾ ಎಂದು ಪ್ರಸಿದ್ಧಿಯನ್ನು ಪಡೆದಿದೆ.
ನವರಾತ್ರಿ ಸಂದರ್ಭದಲ್ಲಿ ಒಂದೇ ಕಡೆ ನವದುರ್ಗೆಯರ ಮೂರ್ತಿಗಳನ್ನು ಇಟ್ಟು ಆರಾಧನೆ ಮಾಡುವುದು ಕಡಿಮೆ. ಒಂದೊಂದು ಕಡೆ ಒಂದೊಂದು ದೇವಿಯನ್ನು ಇಟ್ಟು ಆರಾಧಿಸಲಾಗುತ್ತದೆ. ಆದರೆ, ಕುದ್ರೋಳಿಯಲ್ಲಿ ಮಾತ್ರ ನವದುರ್ಗೆಯರನ್ನು ಒಂದೇ ಕಡೆ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಮತ್ತು ಮಂಗಳೂರು ದಸರಾಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ.
ನವದುರ್ಗೆಯರ ವಿಶೇಷ :
ಶೈಲಪುತ್ರಿ: ಹಿಮವಂತನ ಪುತ್ರಿಯಾಗಿ ಜನಿಸಿದ ಈಕೆಗೆ ಹೈಮವತೀ, ಶೈಲಪುತ್ರಿ, ಗಿರಿಜೆ ಎಂಬ ಹೆಸರುಗಳಿದೆ. ನವರಾತ್ರಿ ಮೊದಲ ದಿನ ಶೈಲಪುತ್ರಿಗೆ ಪೂಜೆ ಸಲ್ಲಿಸಲಾಗುತ್ತದೆ.