ಮುಂದಿನ ಜೀವನ ದೇವರೇ ಗತಿ.. ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡ ಪುರುಷೋತ್ತಮ ಪೂಜಾರಿ ಅಳಲು ಮಂಗಳೂರು: ನಗರದ ಗರೋಡಿ ಬಳಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಸದ್ಯ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಮುಂದಿನ ಜೀವನದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಗಾಯಗೊಂಡಿದ್ದ ಆಟೋ ಚಾಲಕ: ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪುರುಷೋತ್ತಮ ಪೂಜಾರಿ ಅವರು, ಇವತ್ತಿನವರೆಗೆ ಜೀವನ ಹೇಗೋ ನಡೆಯಿತು. ಮುಂದೆ ದೇವರೆ ಗತಿ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು. ನವೆಂಬರ್ 19ರಂದು ನಾಗುರಿಯಲ್ಲಿ ನಾನು ಆಟೋ ರಿಕ್ಷಾದಲ್ಲಿ ಬರುವಾಗ ಓರ್ವ ಕೈ ತೋರಿಸಿ ನಿಲ್ಲಿಸಿದ. ಬಳಿಕ ರಿಕ್ಷಾ ಹತ್ತಿದ ಆತ ಪಂಪ್ ವೆಲ್ಗೆ ಬಿಡಲು ತಿಳಿಸಿದ್ದ. ಈ ವೇಳೆ ಆತನ ಬಳಿ ಒಂದು ಬ್ಯಾಗ್ ಇತ್ತು. ರಿಕ್ಷಾದಲ್ಲಿ ಹೋಗುತ್ತಿರಬೇಕಾದರೆ ಗರೋಡಿ ಬಳಿ ದೊಡ್ಡ ಶಬ್ದವಾಗಿತ್ತು. ಈ ವೇಳೆ ರಿಕ್ಷಾದೊಳಗೆ ಹೊಗೆ ತುಂಬಿಕೊಂಡು ಸಂಪೂರ್ಣ ಕತ್ತಲು ಆವರಿಸಿತ್ತು. ಮುಂದೆ ರಿಕ್ಷಾ ಚಲಾಯಿಸಲು ಸಾಧ್ಯವಾಗದೆ ಅಲ್ಲಿಯೇ ನಿಲ್ಲಿಸಿದೆ. ಬಳಿಕ ನಮ್ಮಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆ ವಿವರಿಸಿದರು.
ಬಾಂಬ್ ಸ್ಫೋಟ ಆದದ್ದು ಗೊತ್ತಿರಲಿಲ್ಲ :ಅದು ಸ್ಪೋಟ ಆದದ್ದು ಬಾಂಬ್ ಎಂದು ಗೊತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಇರುವಾಗ ಮತ್ತೆ ಪೊಲೀಸರು ಬಂದು ಹೇಳಿದಾಗ ಅದು ಬಾಂಬ್ ಸ್ಪೋಟ ಎಂದು ಗೊತ್ತಾಗಿದೆ. ಸುಟ್ಟಗಾಯಗಳಿಂದಾಗಿ ಮುಖ ಮತ್ತು ದೇಹದ ರೂಪ ಬದಲಾವಣೆ ಆಗಿದೆ. ಬಾಂಬ್ ಸ್ಫೋಟಿಸಿದ ಶಾರೀಕ್ ಸಣ್ಣ ಪ್ರಾಯದ ಹುಡುಗ. ಅವನನ್ನು ಮತ್ತು ನನ್ನನ್ನು ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಕೋಣೆಯಲ್ಲಿ ಇರಿಸಿದ್ದರು. ಇದೀಗ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದರು.
ಮಗಳ ಇಎಸ್ಐ ಹಣದಲ್ಲಿ ಚಿಕಿತ್ಸಾ ವೆಚ್ಚ:ಕಳೆದ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದೇನೆ. 10 ದಿನಗಳಿಗೊಮ್ಮೆ ವೈದ್ಯರಲ್ಲಿಗೆ ತಪಾಸಣೆಗೆ ಹೋಗಬೇಕು. ಒಂದು ತಿಂಗಳು ಹೊರಗೆ ಹೋಗಬಾರದು. ಒಂದು ವರ್ಷ ದುಡಿಯಬಾರದು ಎಂದು ವೈದ್ಯರು ಹೇಳಿದ್ದಾರೆ. ಇಷ್ಟರವರೆಗೆ ಆಸ್ಪತ್ರೆ ಖರ್ಚು ಮಗಳ ಇಎಸ್ಐ ನಿಂದ ಹೋಯಿತು. ಮುಂದಿನ ಚಿಕಿತ್ಸಾ ವೆಚ್ಚಕ್ಕೆ ದೇವರೆ ಗತಿ ಎಂದು ಅಳಲು ತೋಡಿಕೊಂಡರು.
ಸರಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ :ಇನ್ನು ಸರಕಾರದಿಂದ ಚಿಕಿತ್ಸಾ ವೆಚ್ಚ ಭರಿಸುವ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದರು. ಆದರೆ, ಈ ವರೆಗೂ ಇದರ ತಿಳಿಸಿಲ್ಲ. ಮಗಳಿಗೆ ಮೇ 3ಕ್ಕೆ ಮದುವೆ ನಿಗದಿಯಾಗಿದೆ. ಪದ್ಮರಾಜ್ ಎಂಬವರ ನೇತೃತ್ವದಲ್ಲಿ ಮನೆಯ ನವೀಕರಣ ನಡೆಯುತ್ತಿದೆ. ಮದುವೆಗೆ ಎಂದು ಇಟ್ಟಿದ್ದ ಹಣ ಘಟನೆ ಬಳಿಕ ಖರ್ಚಾಯಿತು. ಹೊಸ ರಿಕ್ಷಾ ಕೊಡುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಸರಕಾರ ಪರಿಹಾರವನ್ನು ನೀಡುವ ಬಗ್ಗೆ ಇವತ್ತು, ನಾಳೆ ಎಂದು ಹೇಳುತ್ತಿದ್ದಾರೆ. ಸರಕಾರದಿಂದ ಯಾರೂ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು. ನಾನು 13 ವರ್ಷಕ್ಕೆ ರಿಕ್ಷಾ ಕಲಿತಿದ್ದೆ. ಕಳೆದ 20 ವರ್ಷಗಳಿಂದ ರಿಕ್ಷಾದಲ್ಲಿ ದುಡಿಯುತ್ತಿದ್ದೇನೆ. ಇದೀಗ ದುಡಿಮೆ ಇಲ್ಲದಂತಾಗಿದೆ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ನವೆಂಬರ್ 19 ರಂದು ಮಂಗಳೂರಿನ ನಾಗುರಿಯಲ್ಲಿ ಶಂಕಿತ ಉಗ್ರ ಶಾರೀಕ್ ಕುಕ್ಕರ್ ಬಾಂಬ್ ನೊಂದಿಗೆ ರಿಕ್ಷಾ ಏರಿದ್ದ. ಈತನ ಬಳಿಯಿದ್ದ ಕುಕ್ಕರ್ ಬಾಂಬ್ ರಿಕ್ಷಾದಲ್ಲಿಯೆ ಗರೋಡಿ ಬಳಿ ಸ್ಪೋಟಿಸಿತ್ತು. ಇದರಿಂದ ಉಗ್ರ ಶಾರೀಕ್ ಮತ್ತು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಸುಟ್ಟ ಗಾಯಗಳಾಗಿತ್ತು. ಶಾರೀಕ್ ಮತ್ತು ಪುರುಷೋತ್ತಮ ಪೂಜಾರಿ ಅವರನ್ನು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗಿತ್ತು. ಸರಕಾರದಿಂದ ಚಿಕಿತ್ಸಾ ವೆಚ್ಚ ನೀಡುವ ಭರವಸೆ ನೀಡಲಾಗಿದ್ದರೂ ಪುರುಷೋತ್ತಮ ಪೂಜಾರಿ ಅವರಿಗೆ ಮಗಳ ಇಎಸ್ಐ ಮೂಲಕ ಚಿಕಿತ್ಸಾ ವೆಚ್ಚ ನೀಡಲಾಗಿತ್ತು. ಆ ಬಳಿಕ ಜಿಲ್ಲಾಧಿಕಾರಿಗಳು ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ನೀಡಲಾಗುವುದೆಂದು ತಿಳಿಸಿದ್ದರು.
ಇದನ್ನೂ ಓದಿ :ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಗಾಯಗೊಂಡಿದ್ದ ರಿಕ್ಷಾ ಚಾಲಕ ಗುಣಮುಖ