ಮಂಗಳೂರು:ಹಡೆ ಬಳ್ಳಿಯನ್ನು ಸಂಶೋಧನೆ ಮಾಡಿ, ಅದನ್ನು ಶುದ್ಧೀಕರಣ ಮಾಡಿ ಕ್ಯಾನ್ಸರ್‌ಗೆ ರಾಮಬಾಣವಾಗುವ ಅಂಶವನ್ನು ಮಂಗಳೂರಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಅಂಶಕ್ಕೆ ಭಾರತ ಸರ್ಕಾರದಿಂದ ಪೇಟೆಂಟ್ ಪಡೆದಿದ್ದಾರೆ.
ಮಂಗಳೂರು ವಿವಿ ವಿಜ್ಞಾನಿಗಳು 2014-15ರಲ್ಲಿ ಮೊದಲ ಬಾರಿಗೆ ಟೆಂಟ್ರಾಡ್ರೈನ್ ಬಗ್ಗೆ ಸಂಶೋಧನೆ ಕೈಗೊಂಡಾಗ ಹಡೆಬಳ್ಳಿಯಲ್ಲಿ ಟೆಂಟ್ರಾಡ್ರೈನ್ ಅಂಶ ಇರುವುದನ್ನು ಗೊತ್ತು ಮಾಡಿದ್ದಾರೆ. ಅಲ್ಲದೇ, ಈ ಬಳ್ಳಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ಕ್ಯಾನ್ಸರ್ ಶಮನಕಾರಿ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.
2017ರಲ್ಲಿ ಪೇಟೆಂಟ್ಗೆ ಸಲ್ಲಿಸಲಾಗಿದ್ದು, ಇದೀಗ 20 ವರ್ಷಗಳ ಅವಧಿಗೆ ಪೇಟೆಂಟ್ ಪ್ರಮಾಣ ಲಭಿಸಿದೆ. ಇದು ಮಂಗಳೂರು ವಿವಿಗೆ ದೊರೆತ ಮೊದಲ ಪೇಟೆಂಟ್ ಕೂಡಾ ಆಗಿದೆ. ಈ ಪ್ರಯೋಗದ ಮೂಲಕ ಸುಲಭವಾಗಿ ಬೇರೆ ಕಾಂಪ್ಲೆಕ್ಸ್ ಮಿಕ್ಸ್ಚರ್ನಿಂದ ಬೇರ್ಪಡಿಸಲು ಸಾಧ್ಯವೇ ಎಂದು ವಿವಿ ಪ್ರಯೋಗಾಲಯದಲ್ಲಿಯೇ ಶುದ್ಧೀಕರಣ (ಪ್ಯೂರಿಟಿ) ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಶೇ.98 ಶುದ್ಧೀಕರಣ ಬರುತ್ತದೆ ಎಂದು ಸಾಬೀತಾಗಿದೆ.
ಮಂಗಳೂರು ವಿವಿ ಸಸ್ಯಶಾಸ್ತ್ರ ವಿಭಾಗದ ಸಂಶೋಧಕರಾಗಿದ್ದ ಪ್ರೊ.ಕೆ.ಆರ್.ಚಂದ್ರಶೇಖರ್ ಮತ್ತು ಪ್ರೊ.ಭಾಗ್ಯ ನೆಕ್ರಕಲಾಯ ಅವರ 'A Process For The Extraction And Purification Of Tetrondine' ಎಂಬ ಸಂಶೋಧನಾ ಪ್ರಕ್ರಿಯೆಗೆ ಪೇಟೆಂಟ್ ದೊರಕಿದೆ. ಈ ಪ್ರಕ್ರಿಯೆಯು ಕ್ಯಾನ್ಸರ್‌ಗೆ ಔಷಧಿಯ ಮೂಲ ಎಂದು ಗುರುತಿಸಿಕೊಂಡಿದೆ. ಪ್ರೊ.ಕೆ.ಆರ್.ಚಂದ್ರಶೇಖರ್ ಅವರು ಮಂಗಳೂರು ವಿವಿಯಲ್ಲಿ ನಿವೃತ್ತಿಯಾದ ಬಳಿಕ ಇದೀಗ ದೇರಳಕಟ್ಟೆಯ ವಿವಿಯಲ್ಲಿ ವಿಜ್ಞಾನಿಯಾಗಿ ಹಾಗೂ ಆಂತರಿಕ ಗುಣಮಟ್ಟದ ಖಾತರಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊ.ಭಾಗ್ಯ ನೆಕ್ರಕಲಾಯ ಅವರು ಯೆನೆಪೊಯ ವಿವಿಯ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.