ಮಂಗಳೂರು (ದಕ್ಷಿಣ ಕನ್ನಡ):ಅ.18ರಂದು ಸುರತ್ಕಲ್ನ ಎನ್ಐಟಿಕೆ ಟೋಲ್ ಗೇಟ್ ತೆರವು ಮಾಡುವಂತೆ ಹೋರಾಟಕ್ಕಿಳಿದಿರುವ ಹೋರಾಟಗಾರರ ಮನೆಗಳಿಗೆ ಪೊಲೀಸರು ರಾತ್ರೋರಾತ್ರಿ ಭೇಟಿ ನೀಡಿ ನೋಟಿಸ್ ನೀಡಿರುವ ಘಟನೆ ನಡೆದಿದೆ. ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರ ಮನೆಗಳಿಗೆ ರಾತ್ರಿ ತೆರಳಿ ಸುರತ್ಕಲ್ ಪೊಲೀಸರು ನೋಟಿಸ್ ನೀಡಿದ್ದಾರೆ.
ಈಗಾಗಲೇ ಸಭೆ ನಡೆಸಿ ಹೋರಾಟ ಹಿಂಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಅದನ್ನು ಹೋರಾಟ ಸಮಿತಿ ತಿರಸ್ಕರಿಸಿ ಹೋರಾಟ ಮುಂದುವರಿಸಿದೆ. ಹಾಗಾಗಿ ನೋಟಿಸ್ ತಲುಪಿದ ಕೂಡಲೇ ಡಿಸಿಪಿ ಅವರ ಕಚೇರಿಗೆ ಭೇಡಿ ನೀಡಿ ಹೋರಾಟ ಮುಂದುವರಿಸುವುದಿಲ್ಲ ಎಂದು ಎರಡು ಲಕ್ಷ ರೂ. ಮೊತ್ತದ ಬಾಂಡ್ಗೆ ಮುಚ್ಚಳಿಕೆ ಬರೆದುಕೊಡಲು ಸೂಚಿಸಲಾಗಿದೆ.