ಮಂಗಳೂರು: ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ಹಾಗೂ ಅದರ ಅಂಗ ಸಂಸ್ಥೆಗಳನ್ನು ನಿಷೇಧ ಮಾಡಿರುವ ಬೆನ್ನಲ್ಲೇ ಇದೀಗ ಮಂಗಳೂರು ಪೊಲೀಸರು ನಗರದಲ್ಲಿರುವ 12 ಕಚೇರಿಗಳಿಗೆ ಬೀಗಮುದ್ರೆ ಹಾಕಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 10 ಪಿಎಫ್ಐ ಕಚೇರಿಗಳು, 1 ಸಿಎಫ್ಐ ಕಚೇರಿ, 1 ಇನ್ಫಾರ್ಮೇಶನ್ ಆ್ಯಂಡ್ ಎಂಪವರ್ಮೆಂಟ್ ಕಚೇರಿಗೆ ಬೀಗ ಜಡಿಯಲಾಗಿದೆ. ಪಣಂಬೂರು ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆ, ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು, ಕಾಟಿಪಳ್ಳ -2ನೇ ಬ್ಲಾಕ್, ಬಜ್ಪೆ ಠಾಣಾ ವ್ಯಾಪ್ತಿಯ ಅಡ್ಡೂರು, ಕಿನ್ನಿಪದವು, ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್, ಕೊಣಾಜೆ ಠಾಣಾ ವ್ಯಾಪ್ತಿಯ ಇನೋಳಿ, ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೂರು, ಮಂಗಳೂರು ಸೌತ್ ಠಾಣಾ ವ್ಯಾಪ್ತಿಯ ನೆಲ್ಲಿಕಾಯಿ ರಸ್ತೆ, ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಕುದ್ರೋಳಿ - ಕರ್ಬಲಾ ರಸ್ತೆಯ ಕಚೇರಿಗಳು ಸೇರಿ ಪಿಎಫ್ಐನ ಒಟ್ಟು 10 ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.