ಮಂಗಳೂರು: ಕದ್ರಿ (ಮಂಗಳೂರು ಪೂರ್ವ) ಠಾಣೆಯಲ್ಲಿ ಮಾದಕ ದ್ರವ್ಯಪೀಡಿತೆ ಎಂಬ ಶೀರ್ಷಿಕೆಯಲ್ಲಿ ಯುವತಿಯೊಬ್ಬಳ ವಿಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸೃಷ್ಟೀಕರಣ ನೀಡಿದ್ದು, ಈ ಯುವತಿ ಮಾದಕವ್ಯಸನಿಯಲ್ಲ ಎಂದು ತಿಳಿಸಿದರು.
ಸೆಪ್ಟೆಂಬರ್ 1, 2023ರಂದು ಬೆಳಿಗ್ಗೆ 6:50ರ ಸುಮಾರಿಗೆ ಪಂಪ್ವೆಲ್ನಲ್ಲಿರುವ ಗಣೇಶ ಮೆಡಿಕಲ್ನಲ್ಲಿ ಯುವತಿಯೋರ್ವಳು ಆಕ್ರಮಣಕಾರಿಯಾದ ರೀತಿಯಲ್ಲಿ ವರ್ತಿಸುತ್ತಿದ್ದಳು. ಈ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾದಕ ದ್ರವ್ಯ ಸೇವನೆ ಮಾಡಿರಬಹುದೆಂದು ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ಆಗ ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರಮಣಕಾರಿ ವರ್ತನೆ ತೋರಿದ್ದಳು. ಇದರಿಂದಾಗಿ ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಇಲಾಖಾ ವಾಹನದಲ್ಲಿಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಕರೆ ತಂದಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೂ ನಿಯಂತ್ರಣ ಮೀರಿ ವರ್ತಿಸಿದ್ದಳು. ಬಳಿಕ ಅಗತ್ಯ ಮಹಿಳಾ ಸಿಬ್ಬಂದಿ ಬಲದೊಂದಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇಲಾಖೆ ವಾಹನದಲ್ಲಿ ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದು, ಆಕೆ ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ಪೂರಕ ಫಲಿತಾಂಶ ಬಂದಿಲ್ಲ. ನಂತರ ಯುವತಿಯನ್ನು ಪೋಷಕರ ವಶಕ್ಕೆ ವಹಿಸಲಾಗಿದೆ. ಉದ್ರೇಕಕಾರಿ ವರ್ತನೆ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.