ಮಂಗಳೂರು ಜ್ಯುವೆಲ್ಲರಿ ಹತ್ಯೆ ಪ್ರಕರಣ : ಆರೋಪಿ ಬಂಧಿಸಿದ ಕೇರಳ ಪೊಲೀಸರಿಗೆ ಕಮಿಷನರ್ ಸನ್ಮಾನ ಮಂಗಳೂರು :ಕಳೆದ ತಿಂಗಳು ನಗರದಲ್ಲಿ ನಡೆದಿದ್ದ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ನೋಡಿ ವ್ಯಕ್ತಿಯನ್ನು ಬಂಧಿಸಿದ ಕೇರಳದ ಪೊಲೀಸರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, ಕಚೇರಿಗೆ ಕರೆಸಿ ಸನ್ಮಾನಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರೇಮ್, ಸಬ್ ಇನ್ಸ್ಪೆಕ್ಟರ್ ಅಜಿತ್ ಪಿ ಕೆ, ಕಾಸರಗೋಡು ಜಿಲ್ಲಾ ಪೊಲೀಸ್ ಘಟಕ ಸಿಬ್ಬಂದಿಗಳಾದ ನಿಜಿನ್ ಕುಮಾರ್ ಎ.ವಿ ಮತ್ತು ರಜೀಶ್ ಕಟ್ಟಂಪಲ್ಲಿ ಅವರನ್ನು ಸನ್ಮಾನಿಸಲಾಯಿತು.
ಆರೋಪಿ ಪತ್ತೆ ಹಚ್ಚಿದ ಪೊಲೀಸ್ ಸಿಬ್ಬಂದಿ ನಿಜಿನ್ ಕುಮಾರ್ ಮತ್ತು ರಜೀಶ್ ಕಟ್ಟಂಪಲ್ಲಿ ಅವರಿಗೆ ಕಮಿಷನರ್ ಕಚೇರಿಯಲ್ಲಿ ಸನ್ಮಾನಿಸಿ ಪ್ರಶಂಸಾ ಪತ್ರವನ್ನು ನೀಡಲಾಯಿತು. ಈ ವೇಳೆ ಕಾಸರಗೋಡು ಡಿವೈಎಸ್ಪಿ ಸುಧಾಕರ್ ಅವರಿಗೂ ಪ್ರಶಂಸಾ ಪತ್ರ ನೀಡಲಾಯಿತು. ಪ್ರಕರಣವನ್ನು ಪತ್ತೆ ಹಚ್ಚಿದ ಡಿಸಿಪಿ ನೇತೃತ್ವದ 8 ಜನರ ತಂಡಕ್ಕೆ 25 ಸಾವಿರ ರೂಗಳ ಬಹುಮಾನ ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, ಫೆಬ್ರವರಿ 3ರಂದು ಮಂಗಳೂರಿನ ಜ್ಯುವೆಲ್ಲರಿಯೊಂದರಲ್ಲಿ ರಾಘವೇಂದ್ರ ಆಚಾರ್ಯ ಎಂಬವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸುಳಿವು ರಹಿತವಾಗಿತ್ತು. ಜ್ಯುವೆಲ್ಲರಿ ಶಾಪ್ ಒಳಗಿದ್ದ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇನ್ನು ಆರೋಪಿಯ ಚಲನವಲನವನ್ನು ಸನಿಹದಲ್ಲಿದ್ದ ಅಂಗಡಿಗಳ ಸಿಸಿಟಿವಿಯಿಂದ ಪತ್ತೆ ಹಚ್ಚಿ ಆತನ ಪೊಟೋವನ್ನು ವಿವಿಧೆಡೆ ಪ್ರಸಾರ ಮಾಡಲಾಗಿತ್ತು. ಜೊತೆಗೆ ಕೇರಳ ಪೊಲೀಸರಿಗೂ ಈತನ ಫೋಟೋ ಕಳುಹಿಸಿಕೊಡಲಾಗಿತ್ತು.
ಈತ ಮಾರ್ಚ್ 2 ರಂದು ಕಾಸರಗೋಡು ಜಿಲ್ಲೆಗೆ ಬಂದಿದ್ದಾಗ ಈತನನ್ನು ಕಾಸರಗೋಡು ಜಿಲ್ಲೆಯ ಪೊಲೀಸರಿಬ್ಬರು ಪತ್ತೆ ಹಚ್ಚಿದ್ದರು. ಆತ ಹಾಕಿದ್ದ ಬ್ಯಾಗ್ ಫೋಟೋದಲ್ಲಿದ್ದ ಬ್ಯಾಗ್ ಗೆ ಹೋಲಿಕೆಯಾಗುತ್ತಿತ್ತು. ಜೊತೆಗೆ ಆತನ ಚಹರೆಯು ಹೋಲಿಕೆಯಾಗುತ್ತಿದ್ದರಿಂದ ಆತನನ್ನು ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ಆತ ಮಂಗಳೂರು ಜ್ಯುವೆಲ್ಲರ್ಸ್ ಹತ್ಯೆ ಪ್ರಕರಣವನ್ನು ಒಪ್ಪಿಕೊಂಡಿದ್ದ ಎಂದು ತಿಳಿಸಿದರು.
ಆರೋಪಿ ಏಕೈಕ ಸಿಬ್ಬಂದಿ ಇರುವ ಜ್ಯುವೆಲ್ಲರಿ ಶಾಪ್ ಟಾರ್ಗೆಟ್ ಮಾಡಿದ್ದ. ಈತ ಈ ಕೃತ್ಯ ನಡೆಸಿದಾಗ ಮೂರು ಬಟ್ಟೆಗಳನ್ನು ಹಾಕಿದ್ದ. ಕೃತ್ಯ ಎಸಗಿದ ಬಳಿಕ ಆ ಬಟ್ಟೆಯನ್ನು ಬಿಸಾಕಿ ಹೋಗುತ್ತಿದ್ದ. ಕಾಸರಗೋಡಿನಲ್ಲಿ ಆರೋಪಿಯನ್ನು ಬಂಧಿಸಿದ ವೇಳೆಯಲ್ಲಿಯೂ ಆತ ಮೂರು ಬಟ್ಟೆಯನ್ನು ಹಾಕಿದ್ದ. ಆತನ ಈ ವರ್ತನೆಯಿಂದ ಅಂದು ಕೂಡ ದರೋಡೆಗೆ ಸಂಚು ರೂಪಿಸಲು ಬಂದಿದ್ದ ಎಂಬುದು ತಿಳಿದುಬಂದಿದೆ ಎಂದರು.
ಇನ್ನು ಆರೋಪಿಗೆ ದರೋಡೆ ಮಾಡುವುದೇ ಉದ್ದೇಶವಾಗಿತ್ತು. ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ಹತ್ಯೆ ನಡೆದ ಸಂದರ್ಭದಲ್ಲಿ ಮಾಲೀಕರು ಬಂದಿದ್ದರಿಂದ ಗಲಿಬಿಲಿಗೊಂಡಿದ್ದ. ಬಳಿಕ ಆತ ಹೆಚ್ಚಿನ ಚಿನ್ನಾಭರಣ ದೋಚಲು ಸಾಧ್ಯವಾಗದೇ ಕಾಲ್ಕಿತ್ತಿದ್ದ. ಈತ ಇಂತಹ ಕೃತ್ಯಗಳನ್ನು ರಾಜ್ಯದ ಗಡಿ ಭಾಗದಲ್ಲಿ ಮಾಡಿರುವ ಬಗ್ಗೆ ಆತನ ಫೋನನ್ನು ಪರಿಶೀಲಿಸಿದಾಗ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ :ಮಂಗಳೂರು ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಕೊಲೆ: ಕೇರಳದಲ್ಲಿ ಆರೋಪಿ ಸೆರೆ