ಮಂಗಳೂರು: ಹಳೆ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕಿಗೆ 2 ಲಕ್ಷ ಮೌಲ್ಯದ ಬಂಗಾರದ ಉಡುಗೊರೆ ಮಂಗಳೂರು: ಶಾಲೆಗಳಲ್ಲಿ ಶಿಕ್ಷಕರು ನಿವೃತ್ತರಾದಾಗ ಬೀಳ್ಕೊಡುಗೆ ಸಮಾರಂಭ ಮಾಡಿ ಅವರ ಕಾರ್ಯವನ್ನು ಸ್ಮರಿಸುವುದು ಸಾಮಾನ್ಯ. ಆದರೆ ಇಲ್ಲಿ ಹಳೆ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕಿಗೆ 2 ಲಕ್ಷ ರೂ. ಮೌಲ್ಯದ ಬಂಗಾರದ ಸರವನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಈ ಅಪರೂಪದ ಘಟನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರಿನ ಅಕ್ಕರಂಗಡಿಯ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ. ಇಲ್ಲಿನ ಶಿಕ್ಷಕಿ ಜಯಲಕ್ಷ್ಮಿ ಆರ್ ಭಟ್ ವಿದ್ಯಾರ್ಥಿಗಳಿಂದ ಈ ಅಪರೂಪದ ಕೊಡುಗೆಯನ್ನು ಸ್ವೀಕರಿಸಿದ್ದಾರೆ.
ಶಿಕ್ಷಕಿ ವಜಯಲಕ್ಷ್ಮಿ ಹಾಗೂ ಚಿನ್ನದ ಸರ ಜಯಲಕ್ಷ್ಮಿ ಅವರು ಕಳೆದ 3 ದಶಕಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶಿಕ್ಷಕಿಗೆ ಅವರ ನಿವೃತ್ತಿ ವೇಳೆ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿ ಸುಮಾರು 2 ಲಕ್ಷ ಹತ್ತು ಸಾವಿರ ರೂ. ಮೌಲ್ಯದ 33 ಗ್ರಾಂನ ಬಂಗಾರದ ಮಾಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜಯಲಕ್ಷ್ಮೀ ಆರ್ ಭಟ್ ಅವರು ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, 2020ರಲ್ಲಿ ನಿವೃತ್ತಿಯಾಗಿದ್ದರು. ಬಳಿಕ ಶಿಕ್ಷಕರ ಕೊರತೆಯ ಹಿನ್ನೆಲೆಯಲ್ಲಿ ಅದೇ ಶಾಲೆಯಲ್ಲಿ ಯಾವುದೇ ವೇತನ ಪಡೆಯದೇ ಸೇವೆಯನ್ನು ಮುಂದುವರಿಸಿದ್ದರು. ಒಟ್ಟು 31 ವರ್ಷಗಳ ಕಾಲ ದಾರುಲ್ ಇಸ್ಲಾಂ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಜಯಲಕ್ಷ್ಮೀ ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಈ ಅವಧಿಯಲ್ಲಿ ಸುಮಾರು ಎರಡು ಸಾವಿರದಷ್ಟು ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶಕರಾಗಿದ್ದರು.
ಭಾವುಕರಾದ ಶಿಕ್ಷಕಿ ಜಯಲಕ್ಷ್ಮಿ: ಶಾಲೆಯಿಂದ ನಿವೃತ್ತರಾದ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆಯೊಂದನ್ನು ನೀಡಲು ಹಳೆ ವಿದ್ಯಾರ್ಥಿಗಳು ಯೋಜನೆ ರೂಪಿಸಿದ್ದರು. ಈ ಕುರಿತಾಗಿ ವಾಟ್ಸಪ್ ಗ್ರೂಪ್‌ನಲ್ಲಿ ಚರ್ಚೆ ನಡೆಸಿ ಕೊನೆಗೆ ಚಿನ್ನದ ಮಾಲೆಯೊಂದನ್ನು ಉಡುಗೊರೆಯಾಗಿ ನೀಡುವ ನಿರ್ಧಾರಕ್ಕೆ ಬಂದಿದ್ದರು. ಈ ನಿಟ್ಟಿನಲ್ಲಿ ಹಣ ಹೊಂದಿಸಿದ ಹಳೆ ವಿದ್ಯಾರ್ಥಿಗಳು ಸುಮಾರು 2 ಲಕ್ಷದ 10 ಸಾವಿರ ರೂ. ಮೌಲ್ಯದ 33 ಗ್ರಾಂನ ಬಂಗಾರದ ಸರವನ್ನು ಖರೀದಿಸಿದ್ದರು. ಬಂಗಾರದ ಸರ ಉಡುಗೊರೆ ನೀಡುವ ವಿಚಾರವನ್ನು ಅತ್ಯಂತ ಗೌಪ್ಯವಾಗಿರಿಸಿದ್ದ ಹಳೆ ವಿದ್ಯಾರ್ಥಿಗಳ ತಂಡ, ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವದಂದು ಶಿಕ್ಷಕಿಗೆ ಸನ್ಮಾನ ನಡೆಸುವ ವೇಳೆ ಆಶ್ಚರ್ಯಕರ ರೀತಿಯಲ್ಲಿ ಬಂಗಾರದ ಮಾಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಅನಿರೀಕ್ಷತ ಉಡುಗೊರೆಯಿಂದ ಶಿಕ್ಷಕಿಯ ಕಣ್ಣುಗಳು ತೇವಗೊಂಡಿತ್ತು.
ಹಳೆ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕಿಗೆ 2 ಲಕ್ಷ ಮೌಲ್ಯದ ಬಂಗಾರದ ಉಡುಗೊರೆ ಈ ಬಗ್ಗೆ ಮಾತನಾಡಿದ ಜಯಲಕ್ಷ್ಮಿ ಆರ್ ಭಟ್, "ಮಕ್ಕಳ ಪ್ರೀತಿ ಇದ್ದರೆ ಸಾಕು. ಈ ಉಡುಗೊರೆಯ ಅಗತ್ಯ ಇರಲಿಲ್ಲ. ಸನ್ಮಾನ ಕೂಡ ಬೇಡ ಎಂದಿದ್ದೆ. ಅವರು ಶಾಶ್ವತವಾಗಿ ನೆನಪು ಇರಲು ಇಂತಹ ಉಡುಗೊರೆ ಕೊಟ್ಟಿದ್ದಾರೆ. ಅವರು ಮೌಲ್ಯಯುತ ಶಿಕ್ಷಣ ಪಡೆದಿದ್ದಾರೆ ಎಂಬುದಕ್ಕೆ ನನಗೆ ಖುಷಿ ಇದೆ" ಎಂದು ಹೇಳಿದರು.
ಹಳೆ ವಿದ್ಯಾರ್ಥಿ ಕಬೀರ್ ಮಾತನಾಡಿ, "ಈ ಹಿಂದೆ ಹಳೆ ವಿದ್ಯಾರ್ಥಿ ಸಂಘದಿಂದ ಶಿಕ್ಷಕರೊಬ್ಬರಿಗೆ ಕಾರು ಕೊಡುಗೆಯಾಗಿ ನೀಡಿದ್ದೆವು. ನಮ್ಮ ಶಿಕ್ಷಕಿಗೆ ಶಾಲೆಯ ನೆನಪಿಗೋಸ್ಕರ ಈ ಉಡುಗೊರೆಯನ್ನು ಕೊಡಲು ನಿರ್ಧರಿಸಿ ಇದನ್ನು ಮಾಡಿದ್ದೇವೆ. ಇಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಬೇರೆ ಬೇರೆ ಉದ್ಯೋಗದಲ್ಲಿದ್ದಾರೆ. ಅವರೆಲ್ಲ ಕೊಟ್ಟ ಹಣದಿಂದ ಚಿನ್ನದ ಸರ ಮಾಡಿ ಕೊಡಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕನಿಗೆ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ಬೈಕ್ ಗಿಫ್ಟ್