ಮಂಗಳೂರು:ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಯಾದ ಬಳಿಕ ಕರಾವಳಿಯಲ್ಲಿ ಯಾವುದೇ ಕೋಮುಗಲಭೆ ಸಂಭವಿಸಿಲ್ಲ ಎಂದು ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಕುಟುಕಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೋಮುಗಲಭೆಯನ್ನು ತಡೆಯಬೇಕಾದವರೇ, ಒಂದು ಕೋಮಿನ ಜನರ ಮೇಲಿರುವ ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತೆ ಕೋಮುಗಲಭೆ ಉಂಟು ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಗೌಪ್ಯವಾಗಿ ಕರಾವಳಿ ಭಾಗದಲ್ಲಿ ದಾಖಲಾದ 142 ವಿವಿಧ ಪ್ರಕರಣಗಳನ್ನು ಖುಲಾಸೆಗೊಳಿಸಿದೆ. ನನ್ನದೇ ಕ್ಷೇತ್ರದ ಉಳಾಯಿಬೆಟ್ಟು ಗ್ರಾಮದ ಯುವತಿಯೊಬ್ಬಳ ಮೇಲಾದ ಮಾನಭಂಗದ ಪ್ರಕರಣವೂ ಖುಲಾಸೆಯಾಗಿದೆ. ಹೀಗಿದ್ದೂ ಸಿಎಂ ಅಸಂಬ್ಧವಾಗಿ ಮಾತಾಡ್ತಿದ್ದಾರೆ ಎಂದು ಕಿಡಿ ಕಾರಿದರು.
ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ ಚುನಾವಣೆ ಸನಿಹದಲ್ಲಿ ಒಂದು ಕೋಮಿನ ಜನರ ಪ್ರಕರಣಗಳನ್ನು ಮಾತ್ರ ಕೈಬಿಡಲಾಗಿದೆ. ಹೇಳಿಕೊಳ್ಳಲ್ಲಷ್ಟೇ ಬೇರೆ ಕೋಮಿನ ಒಂದಿಬ್ಬರ ಪ್ರಕರಣಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಕುಮಾರಸ್ವಾಮಿ ಅವರು ಕರಾವಳಿಯ ಜನರಿಗೆ ತಿಳುವಳಿಕೆ ಕಡಿಮೆ ಎಂದಿದ್ದರು. ಆದರೆ ಈಗ ಇಲ್ಲಿಯೇ ಬಂದು ಮತಪ್ರಚಾರ ನಡೆಸುತ್ತಿದ್ದಾರೆ. ತಿಳುವಳಿಕೆ ಕಡಿಮೆ ಇರುವವರ ಮತಗಳು ಮಾತ್ರ ಇವರಿಗೆ ಬೇಕಾಗಿದೆ. ಇದಕ್ಕೆ ಸಮ್ಮಿಶ್ರ ಸರಕಾರ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.
ನಮ್ಮ ಸಂಸದ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಜಿಲ್ಲೆಗೆ 16,500 ಕೋಟಿ ರೂ. ಅನುದಾನ ತಂದಿದ್ದಾರೆ. ಈ ಬಗ್ಗೆ ದಾಖಲೆಯನ್ನು ನಾವು ಕೊಡುತ್ತೇವೆ. ಆದರೆ ಸಿದ್ದರಾಮಯ್ಯ ಸರಕಾರ ಹಾಗೂ ಈಗಿನ ಸಮ್ಮಿಶ್ರ ಸರಕಾರ ಈ ಜಿಲ್ಲೆಗೆ ಎಷ್ಟು ಅನುದಾನ ಕೊಟ್ಟಿದೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮೋನಪ್ಪ ಭಂಡಾರಿ, ಗಣೇಶ್ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.