ಮಂಗಳೂರು:ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿ ಕ್ಲಾಟನ್ ಅವರು ಮನೆಯವರೊಂದಿಗೆ ವಿಡಿಯೋ ಕಾಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಕ್ಲಾಟನ್ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದು, ಆತನ ಪೋಷಕರು ಆತಂಕದಲ್ಲಿದ್ದಾರೆ. ವಿಡಿಯೋ ಕಾಲ್ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕ್ಲಾಟನ್ ಸದ್ಯ ಯಾವುದೇ ಆತಂಕವಿಲ್ಲ. ಇಲ್ಲಿ 500 ಮಂದಿ ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಕ್ಲಾಟನ್ ತಂದೆ ಮರ್ವಿನ್ ಡಿಸೋಜಾ ಮಾತನಾಡಿ, ಬೆಳಗ್ಗಿನಿಂದ ನಾವು ಮಗನೊಂದಿಗೆ ಸಂಪರ್ಕದಲ್ಲಿದ್ದೇವೆ. ಅವನು ಇರುವ ಉಕ್ರೇನ್ ರಾಜಧಾನಿ ಕೀವ್ನ ಪ್ರದೇಶದಲ್ಲಿ ಯಾವುದೇ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಮಧ್ಯಾಹ್ನದ ಬಳಿಕ ಏರ್ಪೋಟ್ ಒಂದರಲ್ಲಿ ಮಿಸೈಲ್ ಅಟ್ಯಾಕ್ ಆಗಿದೆ. ಆ ಬಳಿಕ ವಿದ್ಯಾರ್ಥಿಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಎಲ್ಲಾ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ನಮಗೂ ನಮ್ಮ ಮಗ ಆದಷ್ಟು ಶೀಘ್ರ ನಮ್ಮ ಮನೆ ತಲುಪಬೇಕೆಂಬ ಆಸೆಯಿದೆ. ಭಾರತ ಸರ್ಕಾರ ಎಲ್ಲ ವಿದ್ಯಾರ್ಥಿಗಳನ್ನು ಶೀಘ್ರ ತಾಯ್ನಾಡಿಗೆ ಕರೆತರಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ದ.ಕ. ಜಿಲ್ಲಾಡಳಿತವು ಆದಷ್ಟು ಶೀಘ್ರ ಕರೆತರುವ ಆಶ್ವಾಸನೆ ನೀಡಿದೆ ಎಂದು ಹೇಳಿದರು.