ಮಂಗಳೂರು:ರೇಶನ್ ಕಾರ್ಡ್‌ನಲ್ಲಿ ಹೆಸರು ಸೇರಿಸಲು ಸಾಧ್ಯವಾಗದೇ ಆಕ್ರೋಶಗೊಂಡು ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ವಿಡಿಯೋ ಮಾಡಿ ಬಂಧನಕ್ಕೊಳಗಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಜ್ಜರಣಿ ಗ್ರಾಮದ ಅನಿಲ್ ಕುಮಾರ್ (34) ಬಂಧಿತ ಆರೋಪಿ. ಇವರು ಕಳೆದ 12 ವರ್ಷಗಳಿಂದ ಸುರತ್ಕಲ್ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ಆರೋಪಿ ತನ್ನ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಲು ಮತ್ತು ಮಂಗಳೂರಿನಲ್ಲಿ ಸ್ಥಳೀಯವಾಗಿ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ಸರ್ವರ್ ಸಮಸ್ಯೆ ಮತ್ತು ಇತರ ಕಾರಣಗಳಿಂದ ಕಳೆದ 3 ತಿಂಗಳಿಂದ ಇದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹತಾಶೆಗೊಂಡು ವಿಡಿಯೋ ಮಾಡಿ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಮೊದಲಿಗೆ ಕನ್ನಡದಲ್ಲಿ ನಿಂದಿಸಿ ಬಳಿಕ ತುಳುವಿನಲ್ಲಿಯೂ ಕೆಟ್ಟ ಪದಗಳಿಂದ ಬೈದಿರುವುದು ದೃಶ್ಯದಲ್ಲಿದೆ.