ಮಂಗಳೂರು: ನಗರದ ಖಾಸಗಿ ಕಾಲೇಜಿಗೆ ಸಂಬಂಧಿಸಿದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಘಟನೆ ಎಂದು ವೈರಲ್ ಆಗುತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತರು ಇದೊಂದು ಸುಳ್ಳು ಸುದ್ದಿ, ಸಾರ್ವಜನಿಕರು ಈ ಬಗ್ಗೆ ಆತಂಕಿತರಾಗಬಾರದು ಎಂದು ವದಂತಿಗೆ ತೆರೆ ಎಳೆದಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಿನ್ನೆ(ಸೋಮವಾರ) ನಡೆದಿರುವ ಘಟನೆಯೆಂದು ಕೇಸರಿ ಹಾಗೂ ಹಿಜಾಬ್ ಬಗ್ಗೆ ವಿದ್ಯಾರ್ಥಿಗಳ ತಂಡಗಳ ನಡುವಿನ ಘೋಷಣೆಯ ವಿಡಿಯೋ ವೈರಲ್ ಆಗುತ್ತಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತ ಮಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ.