ಮಂಗಳೂರು ದಸರಾಗೆ ಭರದ ಸಿದ್ಧತೆ ಮಂಗಳೂರು (ದಕ್ಷಿಣ ಕನ್ನಡ): ವೈಭವದ ಮಂಗಳೂರು ದಸರಾ ಅಕ್ಟೋಬರ್ 15ರಿಂದ ಆರಂಭವಾಗಿ ಅಕ್ಟೋಬರ್ 25ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭರದಿಂದ ಪೂರ್ವ ಸಿದ್ಧತೆ ನಡೆಯುತ್ತಿದೆ.
ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ಮಂಗಳೂರು ದಸರಾಗೆ ದಿನಗಣನೆ ಆರಂಭವಾಗಿದೆ. ಕುದ್ರೋಳಿ ಕ್ಷೇತ್ರದಲ್ಲಿ ಅ.15ರಂದು ನವದುರ್ಗೆಯರು, ಮಹಾಗಣಪತಿ ಸಹಿತ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದೆ. ಹಾಗಾಗಿ ಕ್ಷೇತ್ರದ ಗೋಪುರ, ನೆಲಹಾಸುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇಡೀ ದೇವಸ್ಥಾನ, ಆವರಣ ಗೋಡೆಗಳಿಗೆ ಸುಣ್ಣ-ಬಣ್ಣಗಳನ್ನು ಬಳಿಯಲಾಗುತ್ತಿದೆ.
ಇಲ್ಲಿನ ದಸರಾದ ಪ್ರಮುಖ ಆಕರ್ಷಣೆ ನಗರದ ವಿದ್ಯುತ್ ಅಲಂಕಾರ. ನಗರದಾದ್ಯಂತ ವಿದ್ಯುತ್ ದೀಪಾಲಂಕಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ. ದಸರಾದ ಕೊನೆಯ ದಿನ ಅ.24ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ನಾನಾ ಕಲಾತಂಡಗಳು, ಹುಲಿವೇಷ , ಚೆಂಡೆ ತಂಡಗಳು ಸೇರಿದಂತೆ 60ಕ್ಕೂ ಅಧಿಕ ಟ್ಯಾಬ್ಲೋಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ.
ಹಬ್ಬದ ಪ್ರಯುಕ್ತ ನಗರದ ಫಿಟ್ನೆಸ್ ಕ್ಲಬ್ಗಳಿಂದ ಮ್ಯಾರಥಾನ್ ಆಯೋಜಿಸಲಾಗಿದೆ. ಮೆರವಣಿಗೆ ಸಾಗುವ 7 ಕಿ.ಮೀ ವ್ಯಾಪ್ತಿಯಲ್ಲಿ ಈ ಮ್ಯಾರಥಾನ್ ನಡೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಫೋಟೋಗ್ರಾಫರ್ ಸಂಘದ ಸಹಾಭಾಗಿತ್ವದಲ್ಲಿ ಕ್ಷೇತ್ರದಲ್ಲಿ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಸ್ಫರ್ಧೆಯನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ:ವೈಭವದ ಮೈಸೂರು ದಸರಾ: ಅ. 9ರಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ
10 ದಿನ ನಡೆಯಲಿದೆ ಮಂಗಳೂರು ದಸರಾ: ಅ.24 ರಂದು ಬೆಳಗ್ಗೆ ಗಂಟೆ 10ರಿಂದ ವಾಗೀಶ್ವರಿ ದುರ್ಗಾ ಹೋಮ, 12.30ಕ್ಕೆ ಶಿವಪೂಜೆ, ಸಂಜೆ 4ರಿಂದ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಅ.25ರಂದು ಪ್ರಾತಃಕಾಲ 4ರಿಂದ ಪೂಜೆ ಬಲಿ, ಮಂಟಪ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶ್ರೀ ಶಾರದಾ ವಿಸರ್ಜನೆ, ಅವಭೃತ ಸ್ನಾನ, ರಾತ್ರಿ 7ರಿಂದ 8ರ ತನಕ ಭಜನಾ ಕಾರ್ಯಕ್ರಮ, 8ರಿಂದ ಗುರುಪೂಜೆ ನಡೆಯಲಿದೆ.
ಅ.24ರಂದು ಸಂಜೆ 4ಕ್ಕೆ ಸರಿಯಾಗಿ ಕುದ್ರೋಳಿ ಕ್ಷೇತ್ರದಿಂದ ಮಂಗಳೂರು ದಸರಾ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಈ ಮೆರವಣಿಗೆಗೆ ರಾಜ್ಯದ ನಾನಾ ಕಡೆಯಿಂದ ಆಗಮಿಸುವ ಕಲಾತಂಡಗಳು, ಹುಲಿ ವೇಷ ಹಾಗೂ ಇತರ ವೇಷದ ಟ್ಯಾಬ್ಲೊಗಳು, ವೇಷಭೂಷಣಗಳು, ಚೆಂಡೆ ತಂಡಗಳು ಮೆರುಗು ನೀಡಲಿವೆ.
ಈ ಬಗ್ಗೆ ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್.ಆರ್. ಮಾತನಾಡಿ, "ಇಲ್ಲಿ ಶಾರದಾ ಮಾತೆಯೊಂದಿಗೆ ನವದುರ್ಗೆಯರು ಮಹಾಗಣಪತಿ ಮತ್ತು ಆದಿಶಕ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತೇವೆ. ಅಕ್ಟೋಬರ್ 25 ರಂದು ನಡೆಯುವ ಶೋಭಯಾತ್ರೆಯಲ್ಲಿ ಈ ಬಾರಿ ಕ್ರೈಸ್ತ ಸಮುದಾಯದವರು ಕೂಡ ಒಂದು ಟ್ಯಾಬ್ಲೋ ಮಾಡಲಿದ್ದಾರೆ. ಮಂಗಳೂರು ದಸರಾ ಪ್ರಯುಕ್ತ ಮ್ಯಾರಥಾನ್, ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿಯನ್ನು ನಡೆಸಲಾಗುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಮೈಸೂರು ದಸರಾ: 135 ಕಿ.ಮೀ ವಿದ್ಯುತ್ ದೀಪಾಲಂಕಾರದಲ್ಲಿ ಮಿನುಗಲಿದೆ ಸಾಂಸ್ಕೃತಿಕ ನಗರಿ