ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಕಳೆದ 9 ದಿನಗಳಿಂದ ಆರಾಧನೆಗೊಳ್ಳುತ್ತಿದ್ದ ಶ್ರೀ ಶಾರದಾ ಮಾತಾ, ನವದುರ್ಗೆಯರ ಜಲಸ್ತಂಭನ ಮಾಡುವ ಮೂಲಕ ಮಂಗಳೂರು ದಸರಾಕ್ಕೆ ಅದ್ಧೂರಿ ತೆರೆ ಎಳೆಯಲಾಯಿತು.
ಅ.7ರಂದು ನವರಾತ್ರಿ ಆರಂಭ ದಿನದಿಂದ ಒಂಬತ್ತು ದಿನಗಳಲ್ಲಿ ಶ್ರೀ ಶಾರದಾ ಮಾತಾ, ನವದುರ್ಗೆಯರ ಸಹಿತ ಶ್ರೀ ಮಹಾಗಣಪತಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಮುಂದಿ 9 ದಿನಗಳ ಕಾಲ ಆರಾಧನೆ ಮಾಡಲಾಗಿತ್ತು. ವಿಜಯದಶಮಿಯ ದಿನ ಎಲ್ಲಾ ಮೂರ್ತಿಗಳನ್ನು ಜಲಸ್ತಂಭನ ಮೂಲಕ ಮಂಗಳೂರು ದಸರಾ ಮುಕ್ತಾಯಗೊಂಡಿತು. ನಿನ್ನೆ ಶುಕ್ರವಾರ ರಾತ್ರಿ 9.30ರ ವೇಳೆಗೆ ವಿಸರ್ಜನಾ ಪೂಜೆ ನಡೆದು ಎಲ್ಲಾ ಮೂರ್ತಿಗಳನ್ನು ದೇವಾಲಯದ ಪುಷ್ಕರಣಿಯಲ್ಲಿ ಜಲಸ್ತಂಭನ ಮಾಡಲಾಯಿತು.
ಹುಲಿವೇಷ ಕುಣಿತ:
ಕೋವಿಡ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಮಂಗಳೂರಿನ ರಾಜಬೀದಿಯಲ್ಲಿ ಶ್ರೀಶಾರದಾ ಮಾತೆ, ನವದುರ್ಗೆಯರ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಅದೇ ರೀತಿ ಯಾವುದೇ ಟ್ಯಾಬ್ಲೊ, ಸ್ತಬ್ಧಚಿತ್ರಗಳಿಗೂ ಅವಕಾಶವಿರಲಿಲ್ಲ. ಆದರೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೇದಿಕೆ ನಿರ್ಮಾಣ ಮಾಡಿ ಹುಲಿವೇಷ ಕುಣಿತಕ್ಕೆ ಅವಕಾಶ ನೀಡಲಾಗಿತ್ತು. ಸಾವಿರಾರು ಮಂದಿ ಭಕ್ತಾದಿಗಳು ನಾಡಹುಲಿಗಳ ನರ್ತನವನ್ನು ಕಣ್ತುಂಬಿಕೊಂಡರು.
ಮಂಗಳೂರು ದಸರಾ ಹಿನ್ನೆಲೆಯಲ್ಲಿ ಕಳೆದ 9 ದಿನಗಳಿಂದ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಸಂಭ್ರಮ ಮಾಡಿದ್ದು, ದೇವಳದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಸಾವಿರಾರು ಭಕ್ತರು ದಿನವೂ ದೇವಳಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದು ಪುನೀತರಾದರು. ಶುಕ್ರವಾರ ದಸರಾಕ್ಕೆ ಅದ್ದೂರಿ ತೆರೆ ಎಳೆಯಲಾಗಿದ್ದು, ಇಂದು ಶ್ರೀದೇವರ ಅವಭ್ರೋತ್ಸವದೊಂದಿಗೆ ಈ ಬಾರಿಯ ದಸರಾ ಸಂಪೂರ್ಣಗೊಳ್ಳಲಿದೆ.
ನಾಡಹುಲಿಗಳದ್ದೇ ದರ್ಬಾರ್:
ದಸರಾ ಬಂತೆಂದರೆ ಕರಾವಳಿಯಲ್ಲಿ ನಾಡಹುಲಿಗಳದ್ದೇ ದರ್ಬಾರ್. ಮೈಮೇಲೆ ಬಣ್ಣ ಬಳಿದು, ತಾಸೆಯ, ಬ್ಯಾಂಡ್ ವಾದ್ಯದ ಸದ್ದಿಗೆ ತಕ್ಕಂತೆ ಹೆಜ್ಜೆಯಿರಿಸಿ ಜನರನ್ನು ರಂಜಿಸುವ ನಾಡಹುಲಿಗಳೆಂದರೆ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಕ್ರೇಜ್. ಅಂತಹ ಒಂದು ಸಮ್ಮೋಹನ ಈ ವೇಷದಲ್ಲಿದೆ. ಹುಲಿ ವೇಷಧಾರಿಗಳು ಮೈಮೇಲೆ ಹುಲಿಯ ಪಟ್ಟೆಯಂತೆ, ಕಪ್ಪು ಬಣ್ಣದ ಶಾರ್ದೂಲದಂತೆ, ಚಿಟ್ಟೆ ಹುಲಿಯಂತೆ ಮೈಮೇಲೆ ಪೂರ್ತಿ ಬಣ್ಣ ಬಳಿದು, ತಲೆಗೆ ರೋಮವುಳ್ಳ ಟೊಪ್ಪಿಗೆಯನ್ನು ಧರಿಸಿ ತಾಸೆ, ಬ್ಯಾಂಡ್, ವಾದ್ಯಗಳ ಸದ್ದಿಗೆ ತಕ್ಕಂತೆ ತಲೆಯನ್ನು ಅಲ್ಲಡಿಸುತ್ತಾ ಕೈಕಾಲುಗಳಲ್ಲಿ ವಿವಿಧ ಆಂಗಿಕ ಅಭಿನಯವನ್ನು ಮಾಡಿ ನೋಡುಗರನ್ನು ರಂಜಿಸುತ್ತಾರೆ.
ಮಂಗಳೂರು ದಸರೆಗೆ ಅದ್ಧೂರಿ ತೆರೆ... ಹುಲಿವೇಷಕ್ಕೆ ಜನತೆ ಫಿದಾ ಎರಡು ಕಾಲುಗಳಲ್ಲಿ ನಿಂತು, ನಾಲ್ಕು ಕಾಲುಗಳನ್ನು ಊರಿ ಹೊಂಚು ಹಾಕುವಂತೆ, ಮರಿ ಹುಲಿಗಳನ್ನು ಹತ್ತಿರ ಕರೆದು ಮಮತೆಯನ್ನು ಬೀರುವ ತಾಯಿ ಹುಲಿ, ಮರಿಹುಲಿಗಳ ಆಟ ಹೀಗೆ ವಿವಿಧ ಆಟಗಳನ್ನು ಈ ಹುಲಿವೇಷ ಕುಣಿತದಲ್ಲಿ ಪ್ರದರ್ಶಿಸಲಾಗುತ್ತದೆ. ಅಲ್ಲದೆ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ಹೀಗೆ ವಿವಿಧ ಕಡೆಗಳಲ್ಲಿ ಹೋಗಿ ತಮ್ಮ ಕಲೆಯನ್ನು ಪ್ರದರ್ಶಿಸಿ ಜನರನ್ನು ರಂಜಿಸಿ ತಮ್ಮ ಸಂಭಾವನೆ ಪಡೆಯುತ್ತಾರೆ.
ಹಿಂದೆ ಯಾರಿಗಾದರೂ ಕಾಯಿಲೆ, ರೋಗ-ರುಜಿನವಿದ್ದಲ್ಲಿ ಶಮನವಾಗಲು ದಸರಾ ಸಂದರ್ಭ ಹುಲಿವೇಷ ಹಾಕುತ್ತೇವೆ ಎಂದು ಹರಕೆ ಹೇಳಲಾಗುತ್ತದೆ. ಈ ಪ್ರತೀತಿ ಈಗಲೂ ಬೆಳೆದು ಬಂದಿದೆ. ಈಗಲೂ ದೇವಿಯ ಮೇಲಿನ ಪ್ರೀತ್ಯರ್ಥವಾಗಿ ಹುಲಿವೇಷ ಹಾಕಲಾಗುತ್ತದೆ. ದಸರಾ ಮುಕ್ತಾಯದ ದಿನ ಅವಭೃತ ಸ್ನಾನ ಮಾಡಿ ವೇಷ ಕಳಚುವ ವೇಷಧಾರಿಗಳು ದೇವಾಲಯದ ಮುಂದೆ ಪೂಜೆ ಸಲ್ಲಿಸುವ ಮೂಲಕ ಹುಲಿವೇಷ ಮುಕ್ತಾಯವಾಗುತ್ತದೆ.
ಇದನ್ನೂ ಓದಿ:ಈ ಬಾರಿ ಕೆಕೆಆರ್ ಐಪಿಎಲ್ ಗೆಲ್ಲುವ ಅರ್ಹ ತಂಡವಾಗಿತ್ತು: ಮಹೇಂದ್ರ ಸಿಂಗ್ ಧೋನಿ