ಮಂಗಳೂರು: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ್ದ ಆರೋಪ ಎದುರಿಸುತ್ತಿರುವ ತನಿಖಾಧಿಕಾರಿಗೆ 5 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಈ ಹಣವನ್ನು ಆರೋಪಿಗಳೆಂದು ಪರಿಗಣಿಸಲಾಗಿದ್ದ ಇಬ್ಬರಿಗೆ ಪಾವತಿಸಬೇಕು ಎಂದು ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್, ಪೋಕ್ಸ್ ನ್ಯಾಯಾಲಯ ಆದೇಶಿಸಿದೆ.
ಅತ್ಯಾಚಾರ ಸಂತ್ರಸ್ತ ಬಾಲಕಿಯು ಬಲವಂತವಾಗಿ ಭ್ರೂಣ ಹತ್ಯೆ ಮಾಡಿಸಿದ್ದ ಬಗ್ಗೆ ನೀಡಿದ್ದ ಹೇಳಿಕೆಯ ಆಧಾರದಲ್ಲಿ ನಗರದ ಮಹಿಳಾ ಠಾಣೆಯಲ್ಲಿ 2021ರ ಫೆಬ್ರವರಿಯಲ್ಲಿ ಕಾರ್ಮಿಕನೊಬ್ಬನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕೆಲವು ದಿನಗಳ ಬಳಿಕ ತನ್ನ ಹೇಳಿಕೆಯನ್ನು ಹಿಂಪಡೆದಿದ್ದ ಬಾಲಕಿಯು ತನಗೆ ಇನ್ನೊಬ್ಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪ ಮಾಡಿದ್ದಳು. 2022ರ ಡಿಸೆಂಬರ್‌ನಲ್ಲಿ ನಗರದ ಮಹಿಳಾ ಠಾಣೆಯ ಎಸ್ಐ ಶ್ರೀಕಲಾ ಬಳಿ ಮತ್ತೆ ಹೇಳಿಕೆ ನೀಡಿದ್ದ ಅಪ್ರಾಪ್ತಯು ಸ್ವತಃ ತಂದೆ 3 ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.
ವಿಚಾರಣೆಯ ವೇಳೆ ತನಿಖಾ ವರದಿಯು ಕೈಸೇರುವ ಮುನ್ನವೇ ಮಹಿಳಾ ಠಾಣೆಯ ನಿರೀಕ್ಷಕ ಲೋಕೇಶ್ ಆರೋಪ ಪಟ್ಟಿಯಲ್ಲಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿರುವುದು ತನಿಖೆಯ ಗಂಭೀರ ಲೋಪ ಎಂದು ನ್ಯಾಯಾಧೀಶರು ಪರಿಗಣಿಸಿದ್ದಾರೆ. ಸಂತ್ರಸ್ತೆ ಮೊದಲು ಉಲ್ಲೇಖಿಸಿದ್ದ ಆರೋಪಿಯ ಹೆಸರನ್ನು ತನಿಖಾಧಿಕಾರಿ ಲೋಕೇಶ್ ಕಡೆಗಣಿಸಿದ್ದಾರೆ. ಆ ಆರೋಪಿಯ ರಕ್ತದ ಮಾದರಿಯನ್ನೂ ಸಂಗ್ರಹಿಸಿಲ್ಲ. ತನಿಖಾಧಿಕಾರಿಯು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಪ್ರಕರಣದ ವಿಚಾರಣೆ ಮುಗಿಯುವ ಕೊನೆಯ ಹಂತದಲ್ಲಿ ಆರೋಪಿಗಳ ವಂಶವಾಹಿಯ ತಪಾಸಣಾ ವರದಿಯು ನ್ಯಾಯಾಲಯಕ್ಕೆ ತಲುಪಿದೆ. ವಂಶವಾಹಿ ತಜ್ಞರ ಪ್ರಕಾರ ಈ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂವರು ಆರೋಪಿಗಳೂ ಭ್ರೂಣದ ಜೈವಿಕ ತಂದೆ ಅಲ್ಲ ಎಂದು ತಿಳಿದು ಬಂದಿದೆ.