ಮಂಗಳೂರು: ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಖಂಡಿತವಾಗಿಯೂ ಈ ದೇಶದ ದಲಿತರು ಹಾಗೂ ನಾವು ನಂಬಿರುವ ದೇವರುಗಳು ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಪರಿಶಿಷ್ಟ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಜ್ ಕದ್ರಿ ಹಾಗೂ ಕಾಂಗ್ರೆಸ್ ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷ ಶೇಖರ್ ಕುಕ್ಕೇಡಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಘುರಾಜ್ ಕದ್ರಿ, ಬಿಜೆಪಿ ಸರ್ಕಾರಕ್ಕೆ ದಲಿತರು ವೋಟ್ ಬ್ಯಾಂಕ್ ಆಗಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತ ಯುವತಿಗೆ ಅನ್ಯಾಯವಾಗಿದ್ದು, ಹಿಂದುತ್ವ ಹೊತ್ತುಕೊಂಡು ಓಡಾಡುತ್ತಿರುವ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ದೇಶದಲ್ಲಿ ಕ್ರೂರತೆಯಂತಹ ಘಟನೆ ನಡೆದಿದ್ದರೂ ಪ್ರಧಾನಿ ಮೋದಿ, ಯುಪಿ ಸಿಎಂ ಏಕೆ ಮೌನ ವಹಿಸಿದ್ದಾರೆ. ಯಾರಿಗೂ ಗೊತ್ತಾಗದಂತೆ ಯುವತಿ ಶವ ಸಂಸ್ಕಾರ ಮಾಡಿದ್ದಾರೆ. ಯುವತಿಯ ಪೋಷಕರಿಗೂ ಅನುವು ಮಾಡಿಕೊಟ್ಟಿಲ್ಲ. ಇದನ್ನೆಲ್ಲ ಗಮನಿಸಿದರೆ ಸಾಕ್ಷಿ ನಾಶ ಮಾಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹಂತ ಹಂತವಾಗಿ ದಲಿತರ ಮೇಲೆ ಅನ್ಯಾಯ ನಡೆಯುತ್ತಿದೆ. ಹಾಗಾದರೆ ನಿಮಗೆ ದಲಿತರು ಹಿಂದುಗಳಂತೆ ಕಾಣುತ್ತಿಲ್ಲವೇ? ಯುವತಿಯೊಬ್ಬಳಿಗೆ ಅನ್ಯಾಯವಾದಾಗ ಪ್ರತಿರೋಧ ತೋರುವ ಹಿಂದೂ ಸಂಘಟನೆಗಳು ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಈ ವಿಚಾರವಾಗಿ ಪ್ರತಿಭಟನೆ ನಡೆಸಿದರೆ, ಮಾತನಾಡಿದರೆ ಅವರ ಮೇಲೆ ಇಲ್ಲ - ಸಲ್ಲದ ಆರೋಪ ಮಾಡುತ್ತಿದ್ದೀರಿ. ಅವರ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಅವರು 150 ಗೋವುಗಳನ್ನು ದಾನ ಮಾಡಿರುವ ಹಿಂದೂವಾದಿ. ಲಾಕ್ಡೌನ್ ವೇಳೆ 20 ಲಕ್ಷಕ್ಕೂ ಅಧಿಕ ಆಹಾರದ ಕಿಟ್ಗಳನ್ನು ದಾನ ಮಾಡಿದ್ದಾರೆ. ನೀವು ಯಾವ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ರಘುರಾಜ್ ಕಿಡಿ ಕಾಡಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷ ಶೇಖರ್, ದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಇಲ್ಲಿನ 40 ಕೋಟಿ ಜನ ದಲಿತರು ಆತಂಕದಿಂದ ಬದುಕುವಂತಾಗಿದೆ. ಯುಪಿಯಲ್ಲಿ ಜಾತಿ ಕಾರಣಕ್ಕೆ ಅವಮಾನ ಮಾಡೋದು, ಅತ್ಯಾಚಾರ, ಕೊಲೆ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಯುಪಿ ಘಟನೆಯನ್ನು ಕಂಡಾಗ ಅಲ್ಲಿನ ಸರ್ಕಾರ ದಲಿತರನ್ನು ಯಾವ ರೀತಿ ರಕ್ಷಣೆ ಕೊಡುತ್ತದೆ ಎಂದು ತಿಳಿದು ಬರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಅತ್ಯಾಚಾರಗೊಳಗಾಗಿರುವ ಸಂತ್ರಸ್ತೆಗೆ ಅಲ್ಲಿನ ಸರ್ಕಾರ ಸರಿಯಾದ ಚಿಕಿತ್ಸೆಯನ್ನು ನೀಡಿಲ್ಲ. ನಮ್ಮ ಯುಪಿಎ ಸರ್ಕಾರ ಇರುವಾಗ ನಿರ್ಭಯಾ ಪ್ರಕರಣದಲ್ಲಿ ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿತ್ತು. ಆದರೆ, ಈ ಪ್ರಕರಣದ ತನಿಖೆಯ ಬಗ್ಗೆಯೂ ನಮಗೆ ಯಾವುದೇ ಭರವಸೆ ಇಲ್ಲ. ಈ ಸರ್ಕಾರದಿಂದ ಯಾವುದೇ ರೀತಿಯ ನ್ಯಾಯ ನಮಗೆ ದೊರಕಲು ಸಾಧ್ಯವಿಲ್ಲ. ಈ ಘಟನೆಯನ್ನು ಖಂಡಿಸಿ ಸಾಕಷ್ಟು ಪ್ರತಿಭಟನೆ ನಡೆಯುತ್ತಿದ್ದು, ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ವಜಾಗೊಳ್ಳವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದರು.