ಮಂಗಳೂರು : ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಪರಿಸರ ಹಾಗೂ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರು ಎಂಬಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಚೇಳ್ಯಾರುನ ದೀಪಕ್ (33), ಕಾವೂರಿನ ಸಂದೀಪ್ ಶೆಟ್ಟಿ (38) ಎಂದು ಗುರುತಿಸಲಾಗಿದೆ.
ಆರೋಪಿಗಳಿಬ್ಬರು ಮೊಬೈಲ್ ಫೋನ್ನಲ್ಲಿ ಬೆಟ್ಟಿಂಗ್ ಆ್ಯಪ್ ಉಪಯೋಗಿಸಿಕೊಂಡು ಬೆಟ್ಟಿಂಗ್‌ನಲ್ಲಿ ನಿರತರಾಗಿದ್ದರು. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟಗಳ ಸೋಲು-ಗೆಲುವಿನಲ್ಲಿ ಜೂಜಾಟವಾಡುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸಿಕೊಂಡು ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಎರಡು ಕಡೆ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ 31,000 ರೂ. ಸಾವಿರ ನಗದು ಹಾಗೂ 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸೊತ್ತಿನ ಬೆಲೆ 1,11,000 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಸುರತ್ಕಲ್ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಬೆಟ್ಟಿಂಗ್ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಭಾರತ-ಪಾಕ್ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್, 8 ಪ್ರಕರಣ ದಾಖಲು; 19 ಮಂದಿ ಬಂಧನ
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿಯೂ ಬೆಟ್ಟಿಂಗ್ ದಂಧೆ ನಡೆಯುವ ಎಲ್ಲ ಸಾಧ್ಯತೆಗಳಿವೆ. ಇತ್ತೀಚಿಗೆ ನಡೆದ ಏಷ್ಯಾಕಪ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಂಥ ಪಂದ್ಯಗಳ ವೇಳೆಯಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಅನೇಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಬಾರಿಯೂ ಸಹ ಬೆಟ್ಟಿಂಗ್‌ನಲ್ಲಿ ತೊಡಗುವವರ ಮೇಲೆ ಕಣ್ಣಿಡಲು ರಾಜ್ಯ ಪೊಲೀಸರು ಸಜ್ಜಾಗಿದ್ದಾರೆ.
ಬೆಟ್ಟಿಂಗ್ ಹೇಗೆ ನಡೆಯತ್ತದೆ?: ಸಾಮಾನ್ಯವಾಗಿ ಬೆಟ್ಟಿಂಗ್ ಎಂಬುದು ಬೇರೆ ಅಪರಾಧ ಚಟುವಟಿಕೆಗಳಂತೆ ನಡೆಯದೇ ಪರಿಚಿತರು, ಸ್ನೇಹಿತರ ಮುಖಾಂತರ ಭೇಟಿಯಾಗುವವರ ನಡುವೆ ನಡೆಯುವುದೇ ಹೆಚ್ಚು. ಆದ್ದರಿಂದ ಪ್ರಮುಖ ಕ್ರೀಡಾಕೂಟಗಳ ಸಂದರ್ಭದಲ್ಲಿ ಪಬ್, ಬಾರ್, ರೆಸ್ಟೋರೆಂಟ್, ಸೋಶಿಯಲ್ ಕ್ಲಬ್ ಮುಂತಾದ ಸ್ಥಳಗಳ ಮೇಲೆ ಪೊಲೀಸರು ಕಣ್ಣಿಟ್ಟಿರುತ್ತಾರೆ.
ಬೆಟ್ಟಿಂಗ್ ಎಂದರೇನು?: ಬೆಟ್ಟಿಂಗ್ ಎನ್ನುವುದು ಹಲವರು ಕಳೆದುಕೊಂಡು ಕೆಲವರು ಮಾತ್ರ ಗಳಿಸುವ ಒಂದು ದೊಡ್ಡ ಮೊತ್ತದ ಹಣದ ವ್ಯವಹಾರ. ಇದರಿಂದ ಅದೆಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸಿದ ನಿದರ್ಶನಗಳಿವೆ. ಕೆಲವೊಮ್ಮೆ ದಂಧೆಯಿಂದಾಗಿ ಹಣ ತೀರಿಸಲಾಗದೆ ಅಥವಾ ಇನ್ನಿತರ ಕಾರಣಗಳಿಂದಾಗಿ ಅಪರಾಧ ಕೃತ್ಯಗಳಿಗೂ ಕಾರಣವಾಗಿದೆ. ಆದ್ದರಿಂದ ಬೆಟ್ಟಿಂಗ್‌ನಲ್ಲಿ ತೊಡಗದಂತೆ ಹಾಗೂ ಅದರ ಬಗ್ಗೆ ಗೊತ್ತಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಇತ್ತೀಚೆಗೆ ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದರು.
ಇದನ್ನೂ ಓದಿ:ಹುಬ್ಬಳ್ಳಿ: ಭಾರತ-ಪಾಕ್ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್, 8 ಪ್ರಕರಣ ದಾಖಲು; 19 ಮಂದಿ ಬಂಧನ