ಮಂಗಳೂರು:ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟದಲ್ಲಿ ಖ್ಯಾತಿ ಹೊಂದಿರುವ ಮಂಗಳೂರಿನ 'ಟೀಂ ಮಂಗಳೂರು' ಇದೀಗ ತೆಲಂಗಾಣ, ಕತಾರ್ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಬೃಹತ್ ಗಾತ್ರದ ಕಥಕ್ಕಳಿ ಗಾಳಿಪಟ ಹಾರಿಸಲಿದೆ.
ಕಥಕ್ಕಳಿ ಗಾಳಿಪಟ ವಿಶೇಷತೆ ಏನು?:ಟೀಂ ಮಂಗಳೂರು ತಂಡದ ಸರ್ವೇಶ್ ರಾವ್ ಅವರ ನೇತೃತ್ವದಲ್ಲಿ ಈ ಕಥಕ್ಕಳಿ ಗಾಳಿಪಟ ಬಾನಂಗಳದಲ್ಲಿ ಹಾರಾಡಲಿದೆ. ತೆಲಂಗಾಣದಲ್ಲಿ ಜನವರಿ 13 ಮತ್ತು 14 ರಂದು ನಡೆಯುವ ಗಾಳಿಪಟ ಉತ್ಸವದಲ್ಲಿ ಮಂಗಳೂರಿನ ಕಥಕ್ಕಳಿ ಗಾಳಿಪಟ ಹಾರಲಿದೆ. 12 ಅಡಿ ಅಗಲ ಹಾಗೂ 38 ಅಡಿ ಉದ್ದವಿರುವ ಈ ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ರಿಪ್ ಸ್ಟಾಕ್ ನೈಲಾನ್ ಫ್ಯಾಬ್ರಿಕ್ ಮಟೀರಿಯಲ್ ಅನ್ನು ಇಂಗ್ಲೆಂಡ್ನಿಂದ ತರಿಸಲಾಗಿದೆ. ಇದು ಪ್ಯಾರಚೂಟ್ ತಯಾರಿಯಲ್ಲಿ ಬಳಕೆಯಾಗುವ ಬಟ್ಟೆಯಾಗಿದೆ. ಗಾಳಿಪಟಕ್ಕೆ ಅಗ್ಯವಿರುವ ಬಿದಿರನ್ನು ಗೋವಾ ರತ್ನಗಿರಿಯ ವೆನ್ ರೂಲಾದಿಂದ ತರಿಸಲಾಗಿದೆ. ಈ ಗಾಳಿಪಟ ತಯಾರಿಯಲ್ಲಿ ಯಾವುದೇ ಬಣ್ಣಗಳನ್ನು ಬಳಿಕ ಮಾಡಿಲ್ಲ. ಬದಲಾಗಿ ಬಣ್ಣದ ಬಟ್ಟೆಗಳಿಂದಲೇ ಈ ಗಾಳಿಪಟವನ್ನು ತಯಾರಿಸಲಾಗುತ್ತದೆ. ಈ ಗಾಳಿಪಟ ತಯಾರಿಗೆ ಸುಮಾರು ಆರು ತಿಂಗಳು ಶ್ರಮಪಡಲಾಗಿದೆ.
ಹೇಗೆ ಸಿದ್ಧವಾಗಿದೆ ಈ ಗಾಳಿಪಟ?:ಕಲಾವಿದ, ಪರಿಸರವಾದಿ ದಿನೇಶ್ ಹೊಳ್ಳ ಅವರು ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ನಕಾಶೆ ರಚಿಸಿ, ಕಲರ್ ಕಾಂಬಿನೇಷನ್ ಅನ್ನು ಆಯ್ಕೆ ಮಾಡಿದ್ದಾರೆ. ಸರ್ವೇಶ್ ರಾವ್ ಅವರ ನಿರ್ದೇಶನದಲ್ಲಿ ತಂಡವು ಈ ಗಾಳಿಪಟ ರಚಿಸಿದೆ. ತೆಲಂಗಾಣದ ಗಾಳಿಪಟ ಉತ್ಸವದ ಬಳಿಕ, ಈ ಗಾಳಿಪಟ ಜನವರಿ 24ರಿಂದ ಫೆಬ್ರವರಿ 4ರ ವರೆಗೆ ಕತಾರ್ ನಲ್ಲಿ ಈ ಗಾಳಿಪಟ ಹಾರಲಿದೆ. ಜೊತೆಗೆ ಅಯೋಧ್ಯೆಯಲ್ಲಿಯೂ ಗಾಳಿಪಟ ಹಾರಾಟಕ್ಕೆ ಅವಕಾಶ ದೊರೆಯುವ ಸಾಧ್ಯತೆಯೂ ಇದೆ ಎಂದು ಹೇಳುತ್ತಾರೆ 'ಟೀಂ ಮಂಗಳೂರು' ರೂವಾರಿ ಸರ್ವೇಶ್ ರಾವ್.