ಮಂಗಳೂರು: ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಮಂಗಳೂರಿನ ಯುವಕ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಸ್ಪರ್ಧಾಳುಗಳಲ್ಲಿ ಕರ್ನಾಟಕದ ಮೂವರು ಅಥ್ಲೀಟ್ಗಳು ಪದಕ ಪಡೆದಿದ್ದು, ಇದರಲ್ಲಿ ಮಂಗಳೂರಿನ ಮೀಜೋ ಚಾಕೋ ಕುರಿಯನ್ ಕೂಡಾ ಒಬ್ಬರು.
ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ನ 400×4 ಮೀಟರ್ ರಿಲೇಯಲ್ಲಿ ಮೀಜೋ ಚಾಕೋ ಕುರಿಯನ್ ಚಿನ್ನದ ಪದಕ ಪಡೆದಿದ್ದಾರೆ. ಇವರು 2023ರಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೇ ಚಿನ್ನದ ಪದಕ ಗೆದ್ದಿದ್ದರು. ಬಳಿಕ ಅಂತಾರಾಷ್ಟ್ರೀಯ ಮಟ್ಟದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಮೀಜೋ ಚಾಕೋ ಕುರಿಯನ್ ತಂಡ 3.01 ನಿಮಿಷದಲ್ಲಿ 400×4 ಮೀಟರ್ ಗುರಿ ತಲುಪಿ ಸಾಧನೆ ಮಾಡಿದ್ದಾರೆ. ಇವರ ತಂಡದಲ್ಲಿ ಇಬ್ಬರು ಕೇರಳ, ಒಬ್ಬರು ತಮಿಳುನಾಡು, ಇಬ್ಬರು ಕರ್ನಾಟಕದ ಸ್ಪರ್ಧಾಳುಗಳಿದ್ದರು.
ಮೀಜೋ ಚಾಕೋ ಕುರಿಯನ್ ಮಂಗಳೂರಿನ ಉರ್ವದಲ್ಲಿರುವ ಸಂತ ಅಲೋಶಿಯಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ನಗರದ ಶಾರದಾ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. 2015ರಲ್ಲಿ ಅಥ್ಲೆಟಿಕ್ಸ್ನ್ನು ಆರಂಭಿಸಿದ ಇವರು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದರು. 2019 ಭಾರತೀಯ ವಾಯುಸೇನೆಗೆ ಬಡ್ತಿ ಪಡೆದು, 2022ರ ನವೆಂಬರ್ನಲ್ಲಿ ನ್ಯಾಷನಲ್ ಕ್ಯಾಂಪ್ ಆಯ್ಕೆಯಾಗಿ ಅಲ್ಲಿ ಜಮೈಕಾದ ತರಬೇತುದಾರರಿಂದ ತರಬೇತಿ ಪಡೆದರು. 2023ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಏಷ್ಯನ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ, ವರ್ಲ್ಡ್ ಚಾಂಪಿಯನ್ ಶಿಪ್ನಲ್ಲಿ ಇವರ ತಂಡ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದೀಗ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.