ಮಂಗಳೂರು: ಮನುಷ್ಯನಿಗೆ ನೀರು ಎಷ್ಟು ಮುಖ್ಯವೋ, ಅಷ್ಟೇ ಅಪಾಯಕಾರಿ ಕೂಡ ಹೌದು. ನೀರಿನಲ್ಲಿ ಮುಳುಗಿದರೆ ಪ್ರಾಣಕ್ಕೆ ಅಪಾಯವಿದೆ. ಇಂತಹದರಲ್ಲಿ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿಕೊಂಡು 29 ತಿರುವು ಹೊಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೂರಿಕುಮೇರ್ ನಿವಾಸಿ ಕೆ ಚಂದ್ರ ಶೇಖರ ರೈ ಈ ಸಾಧನೆ ಮಾಡಿದ್ದಾರೆ. ನೀರಿನೊಳಗೆ ಉಸಿರನ್ನು ಬಿಗಿಯಾಗಿ ಹಿಡಿಯುವುದೇ ದೊಡ್ಡ ಸಾಧನೆ. ಅಂತದರಲ್ಲಿ ಇವರು ಮಾಡುದ ಸಾಧನೆ ಬೆರಗು ಮೂಡಿಸುತ್ತದೆ.
ಇವರು ಉಸಿರು ಕಟ್ಟಿಕೊಂಡು ಮುಂಭಾಗದಿಂದ ತಿರುವು ಹೊಡೆಯುವ ವಿಶೇಷ ಪ್ರತಿಭೆ ಹೊಂದಿದ್ದಾರೆ. ಇವರು ಒಂದು ನಿಮಿಷ ಎರಡು ಸೆಕೆಂಡ್ನಲ್ಲಿ ಉಸಿರು ಕಟ್ಟಿಕೊಂಡು ಮುಂಭಾಗದಿಂದ 29 ತಿರುವು ಹೊಡೆದಿದ್ದಾರೆ. ಇದು ರಾಷ್ಟ್ರೀಯ ದಾಖಲೆಯಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ. ಇಂಡಿಯಾ ಬುಕ್ ಅಪ್ ರೆಕಾರ್ಡ್ನ ಪ್ರಮಾಣಪತ್ರ ಮತ್ತು ಪದಕ ಈಗಾಗಲೇ ಇವರ ಕೈ ಸೇರಿದೆ.
ಇವರು ಈ ಹವ್ಯಾಸ ದಾಖಲೆಗೋಸ್ಕರ ಅಲ್ಲ. ಚಂದ್ರ ಶೇಖರ ರೈ ಈಜುಕೊಳದಲ್ಲಿ ಮುಂಭಾಗದಿಂದ ತಿರುವು ಹೊಡೆಯುವುದನ್ನು ಗಮನಿಸಿದ ರಾಷ್ಟ್ರೀಯ ಈಜುಪಟುಗಳಾದ ಸೀತಾರಾಮ್ ಮತ್ತು ಮುಹಮ್ಮದ್ ಅವರು ಇದೊಂದು ದಾಖಲೆಯಾಗಲಿದೆ ಎಂದು ಹೇಳಿದ್ದರು. ಇಂತಹ ಒಂದು ದಾಖಲೆ ಗಿನ್ನಿಸ್ನಲ್ಲಿ ದಾಖಲಾಗಿದೆ. ಅಮೆರಿಕಾದ ವ್ಯಕ್ತಿಯೊಬ್ಬರು ಉಸಿರು ಕಟ್ಟಿ 36 ಬಾರಿ ಮುಂಭಾಗದಿಂದ ತಿರುವು ಮಾಡಿದ್ದು, ಇದು ದಾಖಲೆಯಲ್ಲಿದೆ. ಇದೀಗ ಚಂದ್ರಶೇಖರ್ ರೈ ಅವರು ಇಂಡಿಯಾ ಬುಕ್ ಅಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದು, ಗಿನ್ನಿಸ್ ದಾಖಲೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಕೆ ಚಂದ್ರಶೇಖರ ರೈ ಅವರು, ಈ ದಾಖಲೆಗೆ ಕಳುಹಿಸುವ ದಿನ ನಾನು ಉರ್ಧ್ವಾಸನ ಮಾಡಿ ಬಳಿಕ ಇದನ್ನು ಮಾಡಿದೆ. ಉಳಿದ ದಿನಗಳಲ್ಲಿ 31 ತಿರುವು ಮಾಡುತ್ತಿದ್ದೆ. ಇನ್ನೂ ಗಿನ್ನಿಸ್ ದಾಖಲೆ ಮುರಿಯಲು ಪ್ರಯತ್ನಿಸುತ್ತೇನೆ. ದೀರ್ಘವಾಗಿ ನೀರಿನಲ್ಲಿ ಉಸಿರು ಕಟ್ಟಿ ನಿಲ್ಲಲ್ಲು ಕವಿತಾ ಅವರ ಮೂಲಕ ಪ್ರಾಣಾಯಾಮ ಅಭ್ಯಸಿಸುತ್ತಿದ್ದೇನೆ ಎಂದರು.